ಪ್ರಧಾನ ಸುದ್ದಿ

ಭಾರತದ ಹೈಕಮಿಶನರ್‌ ಹಾಜರಿದ್ದ ಕಾರ್ಯಕ್ರಮದಲ್ಲಿ ವಿಜಯ್ ಮಲ್ಯ: ಭುಗಿಲೆದ್ದ ವಿವಾದ

Lingaraj Badiger
ಲಂಡನ್‌: ದೇಶದ ವಿವಿಧ ಬ್ಯಾಂಕ್ ಗಳಿಂದ ಸಾವಿರಾರು ಕೋಟಿ ರುಪಾಯಿ ಸಾಲ ಪಡೆದು ವಿದೇಶಕ್ಕೆ ಪರಾರಿಯಾಗಿರುವ ಮದ್ಯದ ದೊರೆ ವಿಜಯ್ ಮಲ್ಯ ಹಾಜರಾಗಿದ್ದ ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಭಾರತದ ಹೈಕಮಿಶರ್‌ ಸಹ ಪಾಲ್ಗೊಂಡಿರುವುದು ಈಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ.
ಭಾರತದ ನ್ಯಾಯಾಲಯವೊಂದು ವಿಜಯ್‌ ಮಲ್ಯ ಅವರನ್ನು ಈಗಾಗಲೇ ಘೋಷಿತ ಅಪರಾಧಿ ಎಂದು ಘೋಷಿಸಿದೆ. ಅಲ್ಲದೆ ಭಾರತಕ್ಕೆ ಬೇಕಾಗಿರುವ ವಿಜಯ್ ಮಲ್ಯ ಅವರ ಗಡಿಪಾರು ಪ್ರಕ್ರಿಯೆಗೂ ಭಾರತ ಸರ್ಕಾರ ಚಾಲನೆ ನೀಡಿದ್ದು, ಇಂತಹ ಸಂದರ್ಭದಲ್ಲಿ ಭಾರತದ ರಾಜತಾಂತ್ರಿಕ ಅಧಿಕಾರಿಗಳು ಆರೋಪಿಯೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.
ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಆಯೋಜಿಸಿದ್ದ, ಭಾರತೀಯ ಲೇಖಕ ಸುಹೇಲ್‌ ಸೇಟ್‌ ಅವರು ಪತ್ರಕರ್ತ ಸನ್ನಿ ಸೇನ್‌ ಅವರೊಡಗೂಡಿ ಬರೆದಿರುವ  "ಮಂತ್ರಾಸ್‌ ಫಾರ್‌ ಸಕ್ಸಸ್‌: ಇಂಡಿಯಾಸ್‌ ಗ್ರೇಟೆಸ್ಟ್‌ ಸಿಇಓಸ್‌ ಟೆಲ್‌ ಯು ಹೌ ಟು ವಿನ್‌‌' ಎಂಬ ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ ಭಾರತೀಯ ಹೈಕಮಿಶನರ್‌ ನವತೇಜ್‌ ಶರಣ್‌ ಅವರು ಪಾಲ್ಗೊಂಡಿದ್ದರು. ಇದೇ ಸಮಾರಂಭದಲ್ಲಿ ಕಳಂಕಿತ ಉದ್ಯಮಿ ವಿಜಯ್‌ ಮಲ್ಯ ಕೂಡ ಉಪಸ್ಥಿತರಿದ್ದರು.
ಈ ಬಗ್ಗೆ ಟ್ವೀಟ್ ಮಾಡಿರುವ ಲೇಖಕ ಸೇಟ್‌ ಅವರು, ವಿಜಯ್‌ ಮಲ್ಯ ಉಪಸ್ಥಿತರಿದ್ದ ಈ ಪುಸ್ತಕ ಬಿಡುಗಡೆ ಸಮಾರಂಭವು ಒಂದು ಮುಕ್ತ ಸಮಾರಂಭವಾಗಿದ್ದು ಟ್ವಿಟರ್‌ ಮೂಲಕ ಅದನ್ನು ಪ್ರಚುರಪಡಿಸಲಾಗಿತ್ತು ಮತ್ತು ಯಾರಿಗೂ ನಿರ್ದಿಷ್ಟ ಆಹ್ವಾನ ಪತ್ರವನ್ನು ಕಳುಹಿಸಲಾಗಿರಲಿಲ್ಲ ಎಂದು ಭಾರತೀಯ ಹೈಕಮಿಶನರ್‌ ಉಪಸ್ಥಿತಿಯ ವಿವಾದಕ್ಕೆ ಸ್ಪಷ್ಟೀಕರಣ ನೀಡಿದ್ದಾರೆ.
ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ವಿಜಯ್‌ ಮಲ್ಯ ಉಪಸ್ಥಿತರಿರುವುದನ್ನು ತಿಳಿದೊಡನೆಯೇ ಭಾರತೀಯ ಹೈಕಮಿಶನರ್‌ ಆ ಬಗ್ಗೆ ತಮ್ಮ ಅಸಂತೃಪ್ತಿಯನ್ನು ವ್ಯಕ್ತಪಡಿಸಿ ಸಮಾರಂಭದಿಂದ ಒಡನೆಯೇ ನಿರ್ಗಮಿಸಿದರು ಎಂದು ಸೇಟ್‌ ತಿಳಿಸಿದ್ದಾರೆ.
SCROLL FOR NEXT