ನವದೆಹಲಿ: ಆರ್ ಬಿಐ ಗವರ್ನರ್ ರಘುರಾಮ್ ರಾಜನ್ ಹಾಗೂ ವಿತ್ತ ಸಚಿವಾಲಯದ ಕೆಲವು ಹಿರಿಯ ಅಧಿಕಾರಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದ ತಮ್ಮದೇ ಪಕ್ಷದ ರಾಜ್ಯಸಭಾ ಸದಸ್ಯೆ ಸುಬ್ರಮಣಿಯನ್ ಸ್ವಾಮಿ ಅವರ ಹೇಳಿಕೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಸ್ಪಷ್ಟವಾಗಿ ತಳ್ಳಿಹಾಕಿದ್ದು, ಬಿಜೆಪಿ ಸಂಸದನ ಹೇಳಿಕೆ 'ಅಸಂಬದ್ಧ' ಎಂದಿದ್ದಾರೆ.
ರಘುರಾಮ್ ರಾಜನ್ ಅವರು ಯಾವುದೇ ದೇಶಭಕ್ತರಿಗೂ ಕಡಿಮೆ ಇಲ್ಲ. ಭಾರತಕ್ಕೆ ರಾಜನ್ ನೀಡಿರುವ ಕೊಡುಗೆಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಅವರ ಸೇವೆ ಬಗ್ಗೆ ನಮಗೆ ಹೆಮ್ಮೆ ಇದೆ ಎಂದರು. ಅಲ್ಲದೆ ವಾಸ್ತವವಾಗಿ ಯಾರಾದರೂ ತಾವೂ ವ್ಯವಸ್ಥೆಗಿಂತ ದೊಡ್ಡವರು ಎಂದು ಭಾವಿಸುವುದು ತಪ್ಪು ಎಂದು ಪ್ರಧಾನಿ ಹೇಳಿದ್ದಾರೆ.
'ಅವರು ನಮ್ಮ ಪಕ್ಷದವರೇ ಆಗಿರಲಿ ಅಥವಾ ಹೊರಗಿನವರೇ ಆಗಿರಲಿ, ಆ ರೀತಿ ಹೇಳಿಕೆ ನೀಡುವುದು ತಪ್ಪು ಮತ್ತು ಅದು ಸೂಕ್ತವೂ ಅಲ್ಲ. ಯಾರೂ ದೇಶಕ್ಕಿಂತ ಮತ್ತು ಪಕ್ಷಕ್ಕಿಂತ ದೊಡ್ಡವರಲ್ಲ. ಪ್ರಚಾರಕ್ಕಾಗಿ ಮನಬಂದಂತೆ ಹೇಳಿಕೆ ನೀಡುವುದು ಸರಿಯಲ್ಲ' ಎಂದು ಟೈಮ್ಸ್ ನೌವ್ ನೀಡಿದ ಸಂದರ್ಶನದಲ್ಲಿ ಪ್ರಧಾನಿ ಮೋದಿ ಸುಬ್ರಮಣಿಯನ್ ಸ್ವಾಮಿ ಗೆ ಟಾಂಗ್ ನೀಡಿದ್ದಾರೆ.
ಸುಬ್ರಮಣಿಯನ್ ಸ್ವಾಮಿ ಅವರು ವಿತ್ತ ಸಚಿವ ಅರುಣ್ ಜೇಟ್ಲಿ, ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯನ್ ಹಾಗೂ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಾಂತ್ ದಾಸ್ ಅವರ ವಿರುದ್ಧವೂ ಟೀಕೆ ಮಾಡಿದ್ದರು.