ಪ್ರಧಾನ ಸುದ್ದಿ

ಮೋದಿ ಸಂಪುಟ ಪುನಾರಚನೆ: ಕಾನೂನು ಸಚಿವ ಸದಾನಂದಗೌಡಗೆ ಕೊಕ್?

Lingaraj Badiger
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ವಾರ ತಮ್ಮ ಸಂಪುಟ ಪುನಾರಚನೆ ಮಾಡುವ ಸಾಧ್ಯತೆ ಇದ್ದು, ಈ ವೇಳೆ ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದಗೌಡ ಸೇರಿದಂತೆ ಕೆಲವರನ್ನು ಸಂಪುಟದಿಂದ ಕೈಬಿಡುವ ಸಾಧ್ಯತೆ ಇದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶ ಪ್ರವಾಸ ಕೈಗೊಳ್ಳುವ ಮುನ್ನ ಜುಲೈ 4ರಂದು ಸಂಪುಟ ಪುನಾರಚನೆ ಮಾಡುತ್ತಿದ್ದು, ಈ ವೇಳೆ ಮೊದಲು ರೈಲ್ವೆ ಮಂತ್ರಿಯಾಗಿ, ಹಾಲಿ ಕಾನೂನು ಸಚಿವರಾಗಿರುವ ಡಿ.ಸದಾನಂದ ಗೌಡ ಅವರನ್ನು ಕೈಬಿಟ್ಟು ಅವರ ಸ್ಥಾನಕ್ಕೆ ಯೋಗಿ ಆದಿತ್ಯನಾಥ್ ಅವರನ್ನು ತರಲಾಗುತ್ತಿದೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
5 ರಾಜ್ಯಗಳ ವಿಧಾನಸಭಾ ಚುನಾವಣೆಯ ನಂತರ ಈಗ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟಿರುವ ಬಿಜೆಪಿ, ಮೋದಿ ಸಂಪುಟದಲ್ಲಿ ಆ ರಾಜ್ಯಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡಲು ಮುಂದಾಗಿದೆ.
ಸಿಎನ್ಎನ್ ನ್ಯೂಸ್ 18 ವರದಿಯ ಪ್ರಕಾರ ಹಲವು ಹೊಸ ಮುಖಗಳು ಸಂಪುಟಕ್ಕೆ ಸೇರ್ಪಡೆಯಾಗಲಿದ್ದು, ಸದಾನಂದಗೌಡ ಸೇರಿದಂತೆ ಕೆಲವರಿಗೆ ಕೊಕೆ ನೀಡಲಾಗುತ್ತಿದೆ. ಉತ್ತರ ಪ್ರದೇಶದ ಗೋರಖ್ ಪುರ್ ಸಂಸದ ಯೋಗಿ ಆದಿತ್ಯನಾಥ್, ಸಹರನ್ ಪುರ್ ಸಂಸದ ರಾಘವ್ ಲಖನ್ಪಾಲ್ ಹಾಗೂ ಬಿಜೆಪಿ ಉತ್ತರ ಪ್ರದೇಶ ಉಪಾಧ್ಯಕ್ಷ ಶಿವ ಪ್ರತಾಪ್ ಶುಕ್ಲಾ ಸಂಪುಟ ಸೇರುವ ಸಾಧ್ಯತೆ ಇದೆ.
SCROLL FOR NEXT