ಹೈದರಾಬಾದ್: ಅತ್ತ ಟರ್ಕಿ ರಾಜಧಾನಿ ಇಸ್ತಾನ್ ಬುಲ್ ನಲ್ಲಿ ಇಸಿಸ್ ಉಗ್ರರು ಬಾಂಬ್ ದಾಳಿ ನಡೆಸಿ 38 ಮಂದಿಯ ಧಾರುಣ ಸಾವಿಗೆ ಕಾರಣವಾದ ಘಟನೆ ಬೆಳಕಿಗೆ ಬಂದ ಬೆನ್ನಲ್ಲೇ ಇತ್ತ ತೆಲಂಗಾಣ ರಾಜಧಾನಿ ಹೈದರಾಬಾದ್ ನಲ್ಲಿ ಶಂಕಿತ ಇಸಿಸ್ ಉಗ್ರರ ಸಮೂಹವೇ ಪತ್ತೆಯಾಗಿದೆ.
ಮೂಲಗಳ ಪ್ರಕಾರ ಎನ್ ಐಎ ಅಧಿಕಾರಿಗಳಿಗೆ ಸಿಕ್ಕ ಖಚಿತ ಮಾಹಿತಿಯನ್ನಾಧರಿಸಿ ಬುಧವಾರ ಬೆಳ್ಳಂ ಬೆಳಗ್ಗೆ ಹೈದರಾಬಾದ್ ನ ಹಲವು ಪ್ರದೇಶಗಳಲ್ಲಿ ದಾಳಿ ನಡೆಸಿದ ಎನ್ ಐಎ ಅಧಿಕಾರಿಗಳು ಇಸಿಸ್ ಬೆಂಬಲತ ಸಮೂಹವನ್ನೇ ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಎನ್ ಐಎ ಮೂಲಗಳ ಪ್ರಕಾರ ವಿವಿಧ ಪ್ರದೇಶಗಳಲ್ಲಿ ದಾಳಿ ನಡೆಸಿದ ಅಧಿಕಾರಿಗಳು ಒಟ್ಟು 11 ಮಂದಿ ಇಸಿಸ್ ಬೆಂಬಲಿತ ಉಗ್ರರನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಹೈದಾರಾಬಾದ್ ನ ಮೋಘಲ್ ಪುರ, ಭವಾನಿ ನಗರ, ಮೀರ್ ಚೌಕ್, ಚಂದ್ರಯಾನಗುಟ್ಟಾ, ಬರ್ಕಾಸ್, ತಲಬಕಟ್ಟಾ ಮುಂತಾದ ಪ್ರದೇಶಗಳಲ್ಲಿ ಏಕಕಾಲದಲ್ಲಿ ದಾಳಿ ಮಾಡಿದ ಎನ್ ಐಎ ಅಧಿಕಾರಿಗಳು 11 ಮಂದಿ ಇಸಿಸ್ ಬೆಂಬಲಿತ ವ್ಯಕ್ತಿಗಳನ್ನು ಬಂಧಿಸಿದ್ದಾರೆ.
ಬಂಧನದ ವೇಳೆ ಉಗ್ರರ ಬಳಿ ಇದ್ದ ಅಪಾರ ಪ್ರಮಾಣದ ಶಸ್ತ್ರಾಸ್ತ್ರ, ಸ್ಫೋಟಕ ವಸ್ತುಗಳು ಮತ್ತು ವಿದೇಶ ಕರೆನ್ಸಿಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ. ಬಂಧಿತರ ಪೈಕಿ ನಿಕ್ಕಿ ಜೋಸೆಫ್ ಎಂಬಾತ ಉಗ್ರ ಸಂಘಟನೆಯ ಸ್ಥಳೀಯ ಮುಖ್ಯಸ್ಥ ಎಂದು ತಿಳಿದುಬಂದಿದ್ದು, ಆತನೊಂದಿಗೆ ಮತ್ತೊರ್ವ ಶಂಕಿತ ಆರೋಪಿಯನ್ನು ಎನ್ ಐಎ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಹಿಂದೆ ಇಸಿಸ್ ಗೆ ಬೆಂಬಲ ವ್ಯಕ್ತಪಡಿಸಿ ಬಂಧನಕ್ಕೊಳಗಾಗಿದ್ದ ಮಂದಿ ಇದ್ದ ಪ್ರದೇಶದಲ್ಲಿಯೇ ಈ ಬಾರಿಯೂ ಎನ್ ಐಎ ಅಧಿಕಾರಿಗಳು ದಾಳಿ ಮಾಡಿ ಆರು ಮಂದಿಯನ್ನು ಬಂಧಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಇನ್ನು ಇಸಿಸ್ ಬೆಂಬಲಿತರನ್ನು ಬಂಧಿಸಿದ ಸುದ್ದಿಯನ್ನು ಹೈದಾರಾಬಾದಿನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಖಚಿತ ಪಡಿಸಿದ್ದು, ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಂಡಿರುವುದಾಗಿ ತಿಳಿಸಿದ್ದಾರೆ. ಇದೇ ವೇಳೆ ಬಂಧಿತ ಪ್ರದೇಶದಲ್ಲಿ ಮತ್ತಷ್ಟು ಇಸಿಸ್ ಬೆಂಬಲಿಗರು ಇರಬಹುದು ಎಂದು ಶಂಕಿಸಿರುವ ಅವರು ಈ ಪ್ರದೇಶದಲ್ಲಿ ಮತ್ತಷ್ಟು ಶೋಧ ನಡೆಸುವ ಕುರಿತು ಮಾಹಿತಿ ನೀಡಿದರು.
ಒಟ್ಟಾರೆ ಭಾರತದಲ್ಲಿ ತನ್ನ ನೆಲೆ ಕಂಡುಕೊಳ್ಳುವಲ್ಲಿ ಯತ್ನಿಸುತ್ತಿರುವ ಇಸಿಸ್ ಇದಕ್ಕಾಗಿ ಈಗಾಗಲೇ ತನ್ನ ಕಾರ್ಯಾರಂಭ ಮಾಡಿರುವುದು ಈ ಬಂಧನದಿಂದ ತಿಳಿದುಬಂದಿದೆ.