ರೈತರನ್ನು ತಡೆಯುತ್ತಿರುವ ಪೊಲೀಸರು
ಬೆಂಗಳೂರು: ಶಾಶ್ವತ ನೀರಾವರಿ ಯೋಜನೆ ಜಾರಿಗೆ ಒತ್ತಾಯಿಸಿ ಚಿಕ್ಕಬಳ್ಳಾಪುರ ಹಾಗೂ ಕೋಲಾರದಿಂದ ಸಾವಿರಾರು ರೈತರು ಬೃಹತ್ ಟ್ರ್ಯಾಕ್ಟರ್ ರ್ಯಾಲಿಯೊಂದಿಗೆ ವಿಧಾಸೌಧದತ್ತ ಬರುತ್ತಿದ್ದ ರೈತರನ್ನು ಪೊಲೀಸರು ಮೇಖ್ರಿ ಸರ್ಕಲ್ ಬಳಿ ತಡೆದಿದ್ದು, ರೊಚ್ಚಿಗೆದ್ದ ರೈತರು ರಸ್ತೆಯಲ್ಲೇ ಪ್ರತಿಭಟನೆ ನಡೆಸಿದರು. ಇದರಿಂದಾಗಿ ಏರ್ ಫೋರ್ಟ್ ರಸ್ತೆಯಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಗಿತ್ತು.
ವಿಧಾಸೌಧ ಹಾಗೂ ಮುಖ್ಯಮಂತ್ರಿಗಳ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ರೈತರನ್ನು ಪೊಲೀಸರು ಮೇಖ್ರಿ ಸರ್ಕಲ್ ಬಳಿ ತಡೆದರು. ಆಕ್ರೋಶಗೊಂಡ ರೈತರು ಬಿಎಂಟಿಸಿ ಬಸ್ ಹಾಗೂ ಕಾರುಗಳ ಮೇಲೆ ಕಲ್ಲು ತೂರಿದ ಘಟನೆಯೂ ನಡೆಯಿತು. ಈ ವೇಳೆ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ರೈತರ ಮೇಲೆ ಲಘು ಲಾಠಿ ಪ್ರಹಾರ ನಡೆಸಿದರು. ಅಲ್ಲದೆ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಸೇರಿದಂತೆ ಹಲವು ಮುಖಂಡರನ್ನು ಬಂಧಿಸಿದರು.
ಪೊಲೀಸ್ ಲಾಠಿ ಪ್ರಹಾರದಲ್ಲಿ ಅಶ್ವತ್ಥಪ್ಪ ಎಂಬವರು ಸೇರಿದಂತೆ ಹಲವಾರು ರೈತರು ಗಾಯಗೊಂಡಿದ್ದಾರೆ. ಚಿಕ್ಕಬಳ್ಳಾಪುರದ ರೈತರೊಬ್ಬರಿಗೆ ತಲೆಗೆ, ಕೆಲವರ ಬೆರಳುಗಳಿಗೆ ಏಟು ಬಿದ್ದಿದೆ. ರೈತರ ಪ್ರತಿಭಟನೆಯಿಂದಾಗಿ ಮೇಖ್ರಿ ಸರ್ಕಲ್, ಮೆಜೆಸ್ಟಿಕ್ ಸುತ್ತಮುತ್ತ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ಥವಾಗಿತ್ತು.
ಇದಕ್ಕೂ ಮುನ್ನ ದೇವನಹಳ್ಳಿಯ ರಾಣಿಕ್ರಾಸ್ ಬಳಿಯೇ ಬ್ಯಾರಿಕೇಡ್ ಅನ್ನು ಹಾಕಿ ರೈತರನ್ನು ತಡೆಯಲು ಪೊಲೀಸರು ಯತ್ನಿಸಿದರು. ಆದರೆ ಬ್ಯಾರಿಕೇಡ್ ಮುರಿದು ನೂರಾರು ಟ್ರ್ಯಾಕ್ಟರ್ ಗಳ ಮೂಲಕ ರೈತರು ಮೇಖ್ರಿ ಸರ್ಕಲ್ ಗೆ ಆಗಮಿಸಿದ್ದರು.
ಈ ವೇಳೆ ಮಾತನಾಡಿದ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರು, ರೈತರ ಬೃಹತ್ ಪ್ರತಿಭಟನೆ ಹಿನ್ನೆಲೆಯಲ್ಲಿ ಬೆಂಗಳೂರಲ್ಲಿ ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿವರೆಗೆ ಟ್ರ್ಯಾಕ್ಟರ್, ಲಾರಿ ಸಂಚಾರಕ್ಕೆ ಪೊಲೀಸರು ನಿಷೇಧ ಹೇರಿದ್ದರು. ಆದರೆ ಕುಡಿಯಲು, ಬೆಳೆಗೆ ನೀರಿಲ್ಲದೇ ಸಂಕಷ್ಟಕ್ಕೆ ಸಿಲುಕಿರುವ ರೈತರ ಪ್ರತಿಭಟನೆಯನ್ನು ಹತ್ತಿಕ್ಕಲು ಸರ್ಕಾರ ಇಂತಹ ನಿಷೇಧದ ಕ್ರಮ ಕೈಗೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಟ್ರ್ಯಾಕ್ಟರ್, ಲಾರಿ ಸಂಚಾರ ನಿಷೇಧಿಸುವ ಪೊಲೀಸ್ ಕಮಿಷನರ್, ಮುಂದಿನ ದಿನಗಳಲ್ಲಿ ರೈತರು ಸ್ನಾನ ಮಾಡಿಲ್ಲ, ಫೇರ್ ಅಂಡ್ ಲವ್ಲಿ ಹಚ್ಚಿಕೊಂಡಿಲ್ಲ ಎಂದು ಸಬೂಬು ಹೇಳಿ ನಮ್ಮ ಪ್ರತಿಭಟನೆ ತಡೆಯಲೂಬಹುದು ಎಂದು ಕೋಡಿಹಳ್ಳಿ ವ್ಯಂಗ್ಯವಾಡಿದರು. ಏನೇ ಆದರೂ ನಾವು ಟ್ರ್ಯಾಕ್ಟರ್ ಮೂಲಕ ರಾಲಿ ನಡೆಸಿ ಶಾಶ್ವತ ನೀರಾವರಿ ಯೋಜನೆ ಜಾರಿಗೆ ಆಗ್ರಹಿಸುವ ಹೋರಾಟ ಮುಂದುವರಿಸುವುದಾಗಿ ಕೋಡಿಹಳ್ಳಿ ಹೇಳಿದರು. ಪ್ರತಿಭಟನೆಯಿಂದಾಗಿ ಕೋಲಾರ, ತುಮಕೂರು ರಸ್ತೆ ಬಂದ್ ಆಗಿದೆ. ಕೆಆರ್ ಪುರಂ ಬಳಿ ರಸ್ತೆ ತಡೆದ ರೈತರು ಪ್ರತಿಭಟನೆ ನಡೆಸಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos