ಮುಂಬೈ: ಖಾಸಗಿ ಸ್ಥಳದಲ್ಲಿ ನಡೆಯುವ ಅಶ್ಲೀಲ ಚಟುವಟಿಕೆಯನ್ನು ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಅಪರಾಧವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಬಾಂಬೆ ಹೈಕೋರ್ಟ್ ತೀರ್ಪು ನೀಡಿದೆ.
ಫ್ಲ್ಯಾಟ್ ಒಂದರಲ್ಲಿ ಮಹಿಳೆಯರೊಂದಿಗೆ ಅಶ್ಲೀಲ ಚಟುವಟಿಕೆ ನಡೆಸಿದ ಆರೋಪ ಎದುರಿಸುತ್ತಿದ್ದ 13 ಮಂದಿಯ ಮೇಲಿನ ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯ ಈ ಮಾತು ಹೇಳಿದ್ದು, ಪ್ರಸ್ತುತ ಆರೋಪವನ್ನು ನ್ಯಾಯಮೂರ್ತಿಗಳಾದ ಎನ್.ಎಚ್. ಪಾಟೀಲ್ ಮತ್ತು ಎ.ಎಂ ಬಾದರ್ ಪೀಠ ವಜಾ ಮಾಡಿದೆ.
‘ನಮ್ಮ ಫ್ಲ್ಯಾಟ್‌ನ ಪಕ್ಕದ ಫ್ಲ್ಯಾಟ್‌ನಿಂದ ಜೋರು ದನಿಯಲ್ಲಿ ಸಂಗೀತ ಹಾಕಲಾಗಿದೆ. ಅರೆಬೆತ್ತಲೆಯಾಗಿರುವ ಕೆಲವು ಯುವತಿಯರು ಸಂಗೀತಕ್ಕೆ ನೃತ್ಯ ಮಾಡುತ್ತಿದ್ದು, ಕೆಲವು ಯುವಕರು ಅವರ ಮೇಲೆ ನೋಟುಗಳನ್ನು ಎಸೆಯುತ್ತಿದ್ದರು ಎಂದು ಪತ್ರಕರ್ತರೊಬ್ಬರು ಪೊಲೀಸರಿಗೆ 2015ರ ಡಿಸೆಂಬರ್ 12ರಂದು ದೂರು ಸಲ್ಲಿಸಿದ್ದರು. ಇದನ್ನಾಧರಿಸಿ ಆ ಫ್ಲ್ಯಾಟ್‌ನ ಮೇಲೆ ದಾಳಿ ನಡೆಸಲಾಗಿತ್ತು. ಆ ಹೊತ್ತಿನಲ್ಲಿ ಅರೆಬೆತ್ತಲೆ ಸ್ಥಿತಿಯಲ್ಲಿ ನೃತ್ಯ ಮಾಡುತ್ತಿದ್ದ ಆರು ಯುವತಿಯರು ಮತ್ತು ಮದ್ಯಪಾನ ಮಾಡಿದ್ದ 13 ಪುರುಷರು ಅಲ್ಲಿದ್ದರು. ಅಲ್ಲಿದ್ದ ಪುರುಷರನ್ನು ವಶಕ್ಕೆ ಪಡೆದು ಎಫ್‌ಐಆರ್ ದಾಖಲಿಸಲಾಗಿತ್ತು.
ಬಂಧಿತ ಪುರುಷರ ವವಿರುದ್ಧ ಐಪಿಸಿ 294ನೇ ಕಲಂ ಅಡಿ ಪ್ರಕರಣವನ್ನೂ ದಾಖಲಿಸಲಾಗಿತ್ತು.
ಏತನ್ಮಧ್ಯೆ ‘ಆರೋಪಿಗಳು ಅಶ್ಲೀಲ ಚಟುವಟಿಕೆ ನಡೆಸಿದರು ಎನ್ನಲಾದ ಫ್ಲ್ಯಾಟ್‌ಗೆ ಸಾರ್ವಜನಿಕರಿಗೆ ಪ್ರವೇಶವಿಲ್ಲ. ಅದನ್ನು ಸಾರ್ವಜನಿಕ ಸ್ಥಳ ಎಂದು ಪರಿಗಣಿಸಲು ಸಾಧ್ಯವಿಲ್ಲ. ಹೀಗಾಗಿ ಆರೋಪಿಗಳ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದು ಮಾಡಬೇಕು’ ಎಂದು ಅರ್ಜಿದಾರರ ಪರ ವಕೀಲ ರಾಜೇಂದ್ರ ಶಿರೋಡ್ಕರ್ ವಾದ ಮಂಡಿಸಿದ್ದರು. ಶಿರೋಡ್ಕರ್ ವಾದವನ್ನು ಒಪ್ಪಿದ ಪೀಠ, ಎಫ್‌ಐಆರ್ ರದ್ದುಪಡಿಸುವಂತೆ ಆದೇಶಿಸಿತು.
13 ವ್ಯಕ್ತಿಗಳ ವಿರುದ್ಧವಿದ್ದ ದೂರನ್ನು ವಜಾ ಮಾಡಿದ ನ್ಯಾಯಪೀಠ ಫ್ಲ್ಯಾಟ್ ಅನ್ನು ಖಾಸಗಿ ಉದ್ದೇಶಕ್ಕಾಗಿಯೇ ಖರೀದಿಸಲಾಗಿರುತ್ತದೆ. ಹೀಗಾಗಿ ಅದನ್ನು ಸಾರ್ವಜನಿಕ ಸ್ಥಳ ಎಂದು ಪರಿಗಣಿಸಲು ಸಾಧ್ಯವಿಲ್ಲ. ಐಪಿಸಿಯ 294ನೇ ಕಲಂ ಅಡಿ ಪ್ರಕರಣ ದಾಖಲಿಸಬೇಕಾದರೆ ಅಶ್ಲೀಲ ಅಥವಾ ಇತರರಿಗೆ ಮುಜುಗರ ಉಂಟು ಮಾಡುವಂತಹ ಚಟುವಟಿಕೆಗಳು ಸಾರ್ವಜನಿಕ ಸ್ಥಳಗಳಲ್ಲಿ ನಡೆದಿರಬೇಕು. ಒಂದು ಪ್ರದೇಶವು ಸಾರ್ವಜನಿಕ ಸ್ಥಳ ಎನಿಸಿಕೊಳ್ಳಬೇಕಾದರೆ ಸಾರ್ವಜನಿಕರ ಬಳಕೆಗೆ ಅದು ಮೀಸ ಲಾಗಿರಬೇಕು. ಸಾರ್ವಜನಿಕರಿಗೆ ಅಲ್ಲಿ ಮುಕ್ತ ಪ್ರವೇಶವಿರಬೇಕು ಎಂದು ಹೇಳಿದೆ.
ಸಾರ್ವಜನಿಕ ಸ್ಥಳದಲ್ಲಿ ಅಸಭ್ಯ ವರ್ತನೆ ಕಾನೂನು ಅಪರಾಧ
ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ ಅಥವಾ ಅಶ್ಲೀಲವಾಗಿ ವರ್ತಿಸುವುದು ಐಪಿಸಿಯ 294ನೇ ಕಲಂ ಅಡಿ ಅಪರಾಧ. ಜತೆಗೆ ಸಾರ್ವಜನಿಕ ಸ್ಥಳದಲ್ಲಿ ಆಶ್ಲೀಲವಾಗಿ ಮಾತನಾಡುವುದು, ಅವಾಚ್ಯ ಶಬ್ದಗಳನ್ನು ಬಳಸುವುದು, ಅಶ್ಲೀಲವಾದ ಹಾಡುಗಳನ್ನು ಹಾಡುವುದು ಮತ್ತು ಸನ್ನೆ ಮಾಡುವುದನ್ನೂ ಈ ಕಲಂ ಅಡಿ ಅಪರಾಧ ಎಂದು ಪರಿಗಣಿಸಲಾಗುತ್ತದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos