ನವದೆಹಲಿ: ಮಂಗಳವಾರ ಬೆಳಗ್ಗೆ ಬಾಂಬ್ ಸ್ಫೋಟದಿಂದ ತತ್ತರಿಸಿರುವ ಬ್ರಸಲ್ಸ್ ನ ಜ್ಯಾವೆಂಟಮ್ ವಿಮಾನನಿಲ್ದಾಣದಲ್ಲಿ ತನ್ನೆಲ್ಲಾ ಪ್ರಯಾಣಿಕರ ಮತ್ತು ಸಿಬ್ಬಂದಿಗಳ ಸುರಕ್ಷತೆಯ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದೇವೆ ಎಂದು ಜೆಟ್ ಏರ್ವೇಸ್ ತಿಳಿಸಿದೆ.
"ನಮ್ಮೆಲ್ಲ ಸಿಬ್ಬಂದಿಗಳ ಮತ್ತು ಪ್ರಯಾಣಿಕರ ಬಗ್ಗೆ ಮಾಹಿತಿ ತಿಳಿಯಲು ಜೆಟ್ ಏರ್ವೇಸ್ ಪ್ರಯತ್ನಿಸುತ್ತಿದೆ" ಎಂದು ವಿಮಾನಯಾನ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.
ಮೊದಲ ಮಾಹಿತಿಯ ಪ್ರಕಾರ ಜೆಟ್ ಏರ್ವೇಸ್ ನ ವಿಮಾನಗಳು ಸುರಕ್ಷಿತವಾಗಿವೆ ಎನ್ನಲಾಗಿದೆ.
ನವದೆಹಲಿಯಿಂದ ಮತ್ತು ಮುಂಬೈನಿಂದ ಹೊರಟಿದ್ದ ಎರಡು ವಿಮಾನಗಳು ಸ್ಫೋಟವಾಗುವ ಸಮಯಕ್ಕೆ ಬ್ರಸಲ್ಸ್ ನಲ್ಲಿ ಇಳಿದಿವೆ ಎಂದು ತಿಳಿದುಬಂದಿದೆ.
ಅಂತರ್ಜಾಲ ತಾಣದ ಮಾಹಿತಿಯ ಪ್ರಕಾರ ಜೆಟ್ ಏರ್ವೇಸ್ ನ ೯ಡಬ್ಳ್ಯೂ ೨೩೦ ವಿಮಾನ ದೆಹಲಿಯಿಂದ ಹೊರಟು ಬ್ರಸಲ್ಸ್ ಗೆ ಬೆಳಗ್ಗೆ ೮:೦೮ಕ್ಕೆ ತಲುಪಿದೆ. ಇದು ಸ್ಫೋತಗೊಂಡ ೮ ನಿಮಿಷಗಳ ನಂತರ.
ಮುಂಬೈನಿಂದ ಹೊರಟಿದ್ದ ೯ಡಬ್ಳ್ಯು೨೨೮ ವಿಮಾನ ಬ್ರಸಲ್ಸ್ ನ ಪ್ರಾದೇಶಿಕ ಸಮಯ ಬೆಳಗ್ಗೆ ೭:೧೧ ಕ್ಕೆ ಇಳಿದಿದೆ.
ಈ ಸ್ಫೋಟದಲ್ಲಿ ಹಲವಾರು ಜನರು ಗಾಯಗೊಂಡಿದ್ದು, ವಿವಿಧ ಮಾಧ್ಯಮಗಳ ವರದಿಯ ಪ್ರಕಾರ ಸಾವಿನ ಸಂಖ್ಯೆ ೧೩ ಮುಟ್ಟಿದೆ.
ಸದ್ಯಕ್ಕೆ ವಿಮಾನ ನಿಲ್ದಾಣವನ್ನು ಸ್ಥಗಿತಗೊಳಿಸಿದ್ದು, ಜ್ಯಾವೆಂಟಮ್ ವಿಮಾನನಿಲ್ದಾಣದ ಸ್ಫೋತಗೊಂಡ ಟರ್ಮಿನಲ್ ನಿಂದ ವಿಮಾನಗಳನ್ನು ಹತ್ತಿರದ ವಿಮಾನನಿಲ್ದಾಣಗಳಿಗೆ ವರ್ಗಾಯಿಸಲಾಗಿದೆ ಎಂದು ತಿಳಿದುಬಂದಿದೆ.