ನವದೆಹಲಿ: ಅಗಸ್ಟಾ ವೆಸ್ಟ್ ಲ್ಯಾಂಡ್ ಹಗರಣದ ಬಗ್ಗೆ ಬಿಜೆಪಿ ಹೆಚ್ಚಿನ ಮಾಹಿತಿ ಬಹಿರಂಗಪಡಿಸುವುದನ್ನು ಸ್ವಾಗತಿಸುವೆ ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.
ವಿವಿಐಪಿ ಹೆಲಿಕಾಫ್ಟರ್ ಹಗರಣದ ಬಗ್ಗೆ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ರಾಜ್ಯಸಭೆಯಲ್ಲಿ ಮಾತನಾಡಲಿದ್ದು, ಯುಪಿಎ ಸರ್ಕಾರ ಹಗರಣಕ್ಕೆ ಸಹಾಯ ಮಾಡಿದೆ ಎಂದು ವಾದಿಸಲು ಸಿದ್ಧತೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಸೋನಿಯಾ ಗಾಂಧಿ ಬಿಜೆಪಿ ಹೆಚ್ಚಿನ ಮಾಹಿತಿ ಬಹಿರಂಗ ಪಡಿಸುವುದನ್ನು ಸ್ವಾಗತ ಮಾಡುತ್ತೇನೆ ಎಂದು ತಿಳಿಸಿದ್ದಾರೆ.
ಹಗರಣದ ಸಂಬಂಧ ಬಿಜೆಪಿ ಯುಪಿಎ ಸರ್ಕಾರದ ವಿರುದ್ಧ ಮಾಡುತ್ತಿರುವ ಆರೋಪಗಳಲ್ಲಿ ಹುರುಳಿಲ್ಲ. ರಾಹುಲ್ ಗಾಂಧಿ ಹಾಗೂ ಅವರ ಆಪ್ತ ಕನಿಷ್ಕಾ ಸಿಂಗ್ ಚಾಪರ್ ಡೀಲ್ ನಲ್ಲಿ ಭಾಗಿಯಾಗಿಲ್ಲ ಎಂದು ಸೋನಿಯಾ ಗಾಂಧಿ ಎನ್ ಡಿಟಿವಿಗೆ ತಿಳಿಸಿದ್ದಾರೆ.
ಆದರೆ ವಿವಿಐಪಿ ಹೆಲಿಕಾಫ್ಟರ್ ಪೂರೈಕೆಯಲ್ಲಿ ಲಂಚ ಪಡೆದಿರುವುದು ಸ್ಪಷ್ಟವಾಗಿದ್ದು ಇದಕ್ಕೆ ಯುಪಿಎ ಸರ್ಕಾರದ ನೆರವಿತ್ತು ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಸೇರಿದಂತೆ ಹಲವು ಬಿಜೆಪಿ ನಾಯಕರು ಆರೋಪಿಸಿದ್ದಾರೆ.