ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿ ಅವರ ವಾಷಿಂಗ್ಟನ್ ಪ್ರವಾಸಕ್ಕೂ ಮೊದಲೇ ಭಾರತೀಯರಿಗೆ ಸಿಹಿಸುದ್ದಿ ಲಭಿಸಿದ್ದು, ಭಾರತಕ್ಕೆ ನ್ಯಾಟೋ ಮೈತ್ರೀಕೂಟದಲ್ಲಿ ಸ್ಥಾನ ನೀಡುವ ನಿರ್ಧಾರಕ್ಕೆ ವೈಟ್ ಹೌಸ್ ಅನುಮೋದನೆ ನೀಡಿದೆ.
ಉಗ್ರರ ದಮನ ಮಾಡುತ್ತೇವೆ ಎಂದು ಪೊಳ್ಳು ಭರವಸೆ ನೀಡುತ್ತಿದ್ದ ಪಾಕಿಸ್ತಾನದ ಹೇಳಿಕೆಗಳಿಂದ ರೋಸಿ ಹೋಗಿರುವ ಅಮೆರಿಕ ಭಾರತದತ್ತ ತನ್ನ ಚಿತ್ತ ನೆಟ್ಟಿದ್ದು, ಇಂದು ರಕ್ಷಣಾ ಮಸೂದೆಯಯಲ್ಲಿ ಭಾರತಕ್ಕೆ ನ್ಯಾಟೋ (North Atlantic Treaty Organization) ಮಿತ್ರ ಸ್ಥಾನಮಾನ ನೀಡುವಂತೆ ಕೋರುವ ತಿದ್ದುಪಡಿಗಳಿಗೆ ವೈಟ್ ಹೌಸ್ ಒಪ್ಪಿಗೆ ನೀಡಿದೆ. ಅಮೆರಿಕದ ಈ ಮಹತ್ವದ ನಿರ್ಧಾರದಿಂದಾಗಿ ರಕ್ಷಣಾ ಉಪಕರಣ ಮಾರಾಟ ಮತ್ತು ತಂತ್ರಜ್ಞಾನ ವರ್ಗಾವಣೆಗೆ ಸಂಬಂಧಿಸಿದಂತೆ ನ್ಯಾಟೋ ಮಿತ್ರರಿಗೆ ಸಮನಾದ ಸ್ಥಾನಮಾನ ಭಾರತಕ್ಕೆ ಲಭಿಸಲಿದೆ. ಭಾರತಕ್ಕೆ ನ್ಯಾಟೋ ಮೈತ್ರೀಕೂಟ ಸದಸ್ಯ ರಾಷ್ಟ್ರದ ಸ್ಥಾನಮಾನ ನೀಡುವ ಉಭಯಪಕ್ಷೀಯ ಕರಡಿಗೆ ಅಮೆರಿಕ ಪ್ರಜಾಪ್ರನಿಧಿಗಳು ಅನುಮೋದನೆ ನೀಡಿದ್ದಾರೆ.
ಇದೇ ವೇಳೆ ಹಖ್ಖಾನಿ ಉಗ್ರ ಸಮೂಹದ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿರುವ ಪಾಕಿಸ್ತಾನದ ವಿರುದ್ಧ ಆಮೆರಿಕ ಆಕ್ರೋಶ ವ್ಯಕ್ತಪಡಿಸಿದ್ದು, ಪಾಕಿಸ್ತಾನಕ್ಕೆ ನೀಡಲಾಗುತ್ತಿರುವ 450 ಮಿಲಿಯನ್ (45 ಕೋಟಿ) ಡಾಲರ್ ನೆರವನ್ನು ಕೆಲವೊಂದು ಷರತ್ತುಗಳನ್ನು ಪೂರೈಸದೇ ಇದ್ದರೆ ತತ್ ಕ್ಷಣವೇ ತಡೆ ಹಿಡಿಯುವ ತಿದ್ದುಪಡಿಗೂ ಅಮೆರಿಕದ ವೈಟ್ ಹೌಸ್ ಅನುಮೋದನೆ ನೀಡಿದೆ. 2017ರ ನ್ಯಾಷನಲ್ ಡಿಫೆನ್ಸ್ ಆಥರೈಸೇಷನ್ ಕಾಯ್ದೆಯ (ಎನ್ಡಿಎಎ) ಅನುಮೋದನೆಯು ಭಾರತ ಮತ್ತು ಏಷ್ಯಾ ಫೆಸಿಫಿಕ್ ಪ್ರದೇಶದಲ್ಲಿ ಬೀಜಿಂಗ್ನ ವಿಸ್ತರಣಾ ಯತ್ನಗಳನ್ನು ತಡೆಯುವ ಉದ್ದೇಶವನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಮಾತನಾಡಿರುವ ವೈಟ್ ಹೌಸ್ ನ ಅಮೆರಿಕ ಕಾಂಗ್ರೆಸ್ ನ ಸದಸ್ಯ ಜಾರ್ಜ್ ಹೋಲ್ಡಿಂಗ್ ಅವರು, ತಿದ್ದುಪಡಿ ಕರಡಿಗೆ ಅನುಮೋದನೆ ದೊರೆತಿರುವುದರಿಂದ ಉಭಯ ದೇಶಗಳ ನಡುವಿನ ಸೌಹಾರ್ಧತೆ ಮತ್ತಷ್ಟು ಗಟ್ಟಿಯಾಗಲಿದ್ದು, ರಕ್ಷಣಾ ಸಾಮಗ್ರಿಗಳ ವ್ಯಾಪಾರ ಮತ್ತು ಹೆಚ್ಚಿನ ಮಿಲಿಟರಿ ಸಹಕಾರಕ್ಕೆ ನೆರವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇದೇ ಜೂನ್ 7ರಂದು ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರನ್ನು ಭೇಟಿ ಮಾಡುವ ನಿಟ್ಟಿನಲ್ಲಿ ವಾಷಿಂಗ್ಟನ್ ಗೆ ಪ್ರಯಾಣ ಬೆಳೆಸಲಿದ್ದು, ಅಮೆರಿಕ ಕಾಂಗ್ರೆಸ್ ಅನ್ನು ಉದ್ದೇಶಿಸಿ ಅಮೆರಿಕ ಸಂಸತ್ ನಲ್ಲಿ ಭಾಷಣ ಮಾಡಲಿದ್ದಾರೆ. ಈ ಕಾರ್ಯಕ್ರಮಕ್ಕೂ ಮೊದಲೇ ಭಾರತಕ್ಕೆ ನ್ಯಾಟೋ ಮಿತ್ರಕೂಟ ಸದಸ್ಯ ರಾಷ್ಟ್ರದ ಸ್ಥಾನಮಾನ ದೊರೆತಿದೆ.