ದಾವಣಗೆರೆ: 60 ವರ್ಷಗಳಲ್ಲಿ ಆಗದ ಕೆಲಸವನ್ನು ನಾವು ಎರಡು ವರ್ಷದಲ್ಲಿ ಮಾಡಿದ್ದೇವೆ. ಸ್ಮಾರ್ಟ್ ಸಿಟಿ, ರೈಲ್ವೆ ಯೋಜನೆ, ಸ್ಕಿಲ್ ಡೆವಲಪ್ ಮೆಂಟ್ ಸೇರಿದಂತೆ ಶೀಘ್ರಗತಿಯಲ್ಲಿ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಹೇಳಿದ್ದಾರೆ,
ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಎರಡು ವರ್ಷದ ಪೂರೈಸಿದ ಹಿನ್ನೆಲೆಯಲ್ಲಿ ಇಂದು ದಾವಣೆಗೆರೆಯಲ್ಲಿ ಬಿಜೆಪಿ ಆಯೋಜಿಸಿದ್ದ ವಿಕಾಸ ಪರ್ವ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ದೇಶದ ಅಭಿವೃದ್ಧಿಗಾಗಿ ನಮ್ಮ ಶಕ್ತಿಮೀರಿ ಪ್ರಯತ್ನಿಸುತ್ತಿದ್ದೇವೆ. ಜನ ಸಾಮಾನ್ಯರ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ ಎಂದರು.
ಪ್ರಧಾನಿ ದೊಡ್ಡ ದೊಡ್ಡ ಯೋಜನೆಗಳನ್ನು ತರಲ್ಲ ಎಂದು ಪ್ರತಿಪಕ್ಷದವರು ಆರೋಪಿಸುತ್ತಿದ್ದಾರೆ, ಆದರೆ ಹಿಂದಿನ ಸರ್ಕಾರ ದೊಡ್ಡ ದೊಡ್ಡ ಯೋಜನೆಗಳನ್ನು ತಂದು, ದೊಡ್ಡ ದೊಡ್ಡ ಹಗರಣ ಮಾಡಿದ್ದಾರೆ. ಈಗ ನಾನೂ ಆ ಪಾಪವನ್ನು ಮಾಡಬೇಕೆ? ಎಂದು ಪ್ರಧಾನಿ ಪ್ರಶ್ನಿಸಿದರು, ಅಲ್ಲದೆ ತಪ್ಪು ದಿಕ್ಕಿನಲ್ಲಿ ದೇಶ ಹೋಗಲು ನಾನು ಎಂದಿಗೂ ಬಿಡುವುದಿಲ್ಲ ಎಂದರು.
ರೈತರಿಗೆ ಇಲ್ಲಿವರೆಗೂ ನಮ್ಮ ಸರ್ಕಾರ ಕೊಟ್ಟಷ್ಟು ಬಜೆಟ್ ಅನ್ನು ಯಾರೂ ಕೊಟ್ಟಿಲ್ಲ. ರೈತರು ಮನಸು ಮಾಡಿದರೆ ಭೂಮಿಯಲ್ಲಿ ಬಂಗಾರವನ್ನು ಬೆಳೆಯುತ್ತಾರೆ. ಆದರೆ ಪ್ರತಿ ಬೇಸಿಗೆಯಲ್ಲೂ ಬರಗಾಲ ಜನರನ್ನು ಕಾಡುತ್ತದೆ. ನಾನು ಇದರ ಬಗ್ಗೆ 11 ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ಚರ್ಚಿಸಿದ್ದೇನೆ. ರೈತರು ನೀರಿನ ಸಮಸ್ಯೆ ಎದುರಿಸುತ್ತಿದ್ದು, ಸಮಸ್ಯೆ ಪರಿಹಾರಕ್ಕಾಗಿ ಮಳೆಗಾಲಕ್ಕೂ ಮುನ್ನ ನೀರಿನ ಸಂರಕ್ಷಣೆಗೆ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಮುಖ್ಯಮಂತ್ರಿಗಳಿಗೆ ಸೂಚಿಸಿದ್ದೇನೆ ಎಂದರು.
ಇನ್ನು ಕಬ್ಬು ಬೆಳೆಗಾರರ ನೆರವಿಗೆ ನಮ್ಮ ಸರ್ಕಾರ ಬಂದಿದೆ. ಕಬ್ಬು ಬೆಳೆಗಾರರು ನಷ್ಟ ಅನುಭವಿಸುವುದನ್ನು ತಪ್ಪಿಸಲು ಅಗತ್ಯ ಕ್ರಮ ತೆಗೆದುಕೊಂಡಿದ್ದೇವೆ. ರೈತರ ಖಾತೆಗೆ ನೇರವಾಗಿ ಹಣ ಸೇರುವಂತೆ ಮಾಡಿದ್ದೇವೆ ಎಂದರು.
ಇಂದು ಮಧ್ಯಾಹ್ನ ವಿಶೇಷ ವಿಮಾನದ ಮೂಲಕ ಹುಬ್ಬಳ್ಳಿಗೆ ಬಂದಿಳಿದ ಪ್ರಧಾನಿ ಮೋದಿ ಅಲ್ಲಿಂದ ಹೆಲಿಕಾಪ್ಟರ್ ಮೂಲಕ ದಾವಣಗೆರೆಗೆ ಆಗಮಿಸಿದರು. ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಕಳಸಾ – ಬಂಡೂರಿ ಹೋರಾಟಗಾರರು ಪ್ರಧಾನಿ ಭೇಟಿಗೆ ಅವಕಾಶ ಮಾಡಿಕೊಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಅವಕಾಶ ಸಿಕ್ಕದೇ ಇದ್ದ ಹಿನ್ನೆಲೆಯಲ್ಲಿ ಆಕ್ರೋಶ ವ್ಯಕ್ತಪಡಿಸಿ ಭೇಟಿಗೆ ನುಗ್ಗಿದ ಹಿನ್ನೆಲೆಯಲ್ಲಿ ಕೆಲವು ನಾಯಕರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.