ಬೆಂಗಳೂರು: ಕಾವೇರಿ ನ್ಯಾಯಾಧಿಕರಣದ ಐ ತೀರ್ಪಿನಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಆರೋಪಿಸಿ ಕರ್ನಾಟಕ ಸಲ್ಲಿಸಿರುವ ಅರ್ಜಿಯ ಮರುವಿಚಾರಣೆ ಇದೇ ಅಕ್ಟೋಬರ್ 18ರಂದು ನಡೆಯಲಿದ್ದು, ಈ ಹಿನ್ನಲೆಯಲ್ಲಿ ರಾಜ್ಯಕ್ಕೆ ಯಾವುದೇ ಹಿನ್ನಡೆಯಾಗಬಾರದು ಎಂಬ ಉದ್ದೇಶದಿಂದ ರಾಜ್ಯ ಸರ್ಕಾರ ಉಭಯ ಸದನಗಳ ಅನುಮತಿ ಪಡೆದು ತಮಿಳುನಾಡಿಗೆ ಸೋಮವಾರ ರಾತ್ರಿಯಿಂದಲೇ ನೀರು ಹರಿಸುತ್ತಿದೆ.
ರಾಜ್ಯದ ಪ್ರಮುಖ ಜಲಾಶಯಗಳಾದ ಕೃಷ್ಣರಾಜ ಸಾಗರ, ಕಬಿನಿ, ಹಾರಂಗಿ ಮತ್ತು ಹೇಮಾವತಿ ಜಲಾಶಯಗಳ ಮೂಲಕ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ ಎಂದು ತಿಳಿದುಬಂದಿದೆ. ಕೇವಲ ತಮಿಳುನಾಡಿಗೆ ಮಾತ್ರವಲ್ಲದೇ ರಾಜ್ಯದ ರೈತರಿಗೂ ರಾಜ್ಯ ಸರ್ಕಾರ ನೀರು ಬಿಡುಗಡೆ ಮಾಡುವಂತೆ ಅಧಿಕಾರಿಗಳಿಗೆ ಆದೇಶಿಸಿದೆ. ಈ ಹಿನ್ನಲೆಯಲ್ಲಿ ಮೈಸೂರಿನ ವಿಸಿ ನಾಲೆ ಮೂಲಕವಾಗಿ ಕಾವೇರಿ ಕೊಳ್ಳದ ರೈತರಿಗೆ ರಾತ್ರಿಯಿಂದಲೇ ನೀರು ಹರಿಸಲಾಗುತ್ತಿದೆ ಎಂದು ತಿಳಿದುಬಂದಿದೆ.
ನ್ಯಾಯಾಂಗ ನಿಂದನೆಯಿಂದ ಪಾರಾಯ್ತೇ ರಾಜ್ಯ ಸರ್ಕಾರ?
ಇನ್ನು ಕಾವೇರಿ ವಿಚಾರವಾಗಿ ಸುಪ್ರೀಂ ಕೋರ್ಟ್ ನೀಡಿದ್ದ ಕೆಲ ಆದೇಶಗಳನ್ನು ನೀರಿಲ್ಲ ಎಂಬ ಕಾರಣಕ್ಕಾಗಿ ಕರ್ನಾಟಕ ಸರ್ಕಾರ ಆದೇಶ ಪಾಲನೆ ಮುಂದೂಡಿತ್ತು. ಹೀಗಾಗಿ ಕರ್ನಾಟಕದ ಮೇಲೆ ನ್ಯಾಯಾಂಗದ ತೂಗುಗತ್ತಿ ನೇತಾಡುತ್ತಿತ್ತು. ಆದರೆ ನಿನ್ನೆ ಕೇಂದ್ರ ಸರ್ಕಾರದ ಮಧ್ಯ ಪ್ರವೇಶದಿಂದಾಗಿ ಈ ಭೀತಿ ಕೊಂಚ ದೂರಾಗಿದೆ. ಆ ಮೂಲಕ ರಾಜ್ಯ ಸರ್ಕಾರ ಬೀಸುವ ದೊಣ್ಣೆಯಿಂದ ತಾತ್ಕಾಲಿಕವಾಗಿ ಪಾರಾಗಿದೆ.
ಇಂದು ಮಧ್ಯಾಹ್ನ 2 ಗಂಟೆಗೆ ಮತ್ತೆ ಸುಪ್ರೀಂ ಕೋರ್ಟ್ ವಿಚಾರಣೆ ಇದ್ದು, ಈ ಸಮಯದೊಳಗೆ ತಮಿಳುನಾಡಿಗೆ ಕರ್ನಾಟಕ ನೀರು ಹರಿಸಿದೆ. ಸಂಕಷ್ಟದ ನಡುವೆಯೂ ಕೆಆರ್ಎಸ್, ಕಬಿನಿ ಹಾಗೂ ಹಾರಂಗಿ ಜಲಾಶಯಗಳಿಂದ ಸೋಮವಾರ ರಾತ್ರಿ ನಾಲೆ ಹಾಗೂ ನದಿಗಳಿಗೆ ನೀರು ಬಿಡಲಾಗಿದೆ. ಕೆಆರ್ಎಸ್ನಲ್ಲಿ ಸದ್ಯ 89.73(15.7 ಟಿಎಂಸಿ) ಅಡಿ ನೀರಿದ್ದು, ಕೇವಲ 927 ಕ್ಯೂಸೆಕ್ ಒಳ ಹರಿವಿದೆ. ಕೆಆರ್ಎಸ್- ನದಿ ಹಾಗೂ ನಾಲೆಗಳಿಗೆ ಒಟ್ಟು 6856 ಕ್ಯೂಸೆಕ್ ನೀರನ್ನು ಬಿಡಲಾಗುತ್ತಿದೆ.
50 ಗೇಟ್ ಮೂಲಕ ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. ವಿಶ್ವೇಶ್ವರಯ್ಯ ನಾಲೆಗೆ 2800 ಹಾಗೂ ಆರ್ ಬಿ ಎಲ್ಎಲ್ ನಾಲೆಗೆ 56 ಕ್ಯೂಸೆಕ್ ನೀರು ಹರಿಸಲಾಗುತ್ತಿದೆ. ಕಬಿನಿ- ಜಲಾಶಯದಿಂದ ಒಟ್ಟು 3500 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದ್ದು, ಆ ಪೈಕಿ ನದಿಗೆ 2500 ಕ್ಯೂಸೆಕ್ ಹಾಗೂ ನಾಲೆಗಳಿಗೆ 1000 ಕ್ಯೂಸೆಕ್ ಹರಿಸಲಾಗುತ್ತಿದೆ. ಇನ್ನು ಹಾರಂಗಿ ಜಲಾಶಯದಿಂದ ನದಿಗೆ 4000 ಕ್ಯೂಸೆಕ್ ಹಾಗೂ ನಾಲೆಗಳಿಗೆ 1500 ಕ್ಯೂಸೆಕ್ ನೀರು ಹರಿಸಲಾಗುತ್ತಿದೆ ಎಂದು ತಿಳಿದುಬಂದಿದೆ.