ನವದೆಹಲಿ: ಮುಂದಿನ ಆದೇಶದವರೆಗೆ ತಮಿಳುನಾಡಿಗೆ ನಿತ್ಯ ಎರಡು ಸಾವಿರ ಕ್ಯೂಸೆಕ್ಸ್ ನೀರು ಹರಿಸುವಂತೆ ಬುಧವಾರ ಮತ್ತೆ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
ಕಾವೇರಿ ನ್ಯಾಯಾಧಿಕರಣದ ಐ ತೀರ್ಪು ಪ್ರಶ್ನಿಸಿ ಕರ್ನಾಟಕ, ತಮಿಳುನಾಡು ಸೇರಿದಂತೆ ನಾಲ್ಕು ರಾಜ್ಯಗಳು ಸಲ್ಲಿಸಿರುವ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಮೂರ್ತಿ ದೀಪಕ್ ಮಿಶ್ರ, ನ್ಯಾ.ಅಮಿತವ್ ರಾಯ್, ನ್ಯಾ.ಎಎಂ ಖಾನ್ವಿಲ್ಕರ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠ, ಮೇಲ್ಮನವಿ ಅರ್ಜಿಗಳ ಸಿಂಧುತ್ವದ ಬಗ್ಗೆ ತೀರ್ಪು ಕಾಯ್ದಿರಿಸಿ, ಮುಂದಿನ ಆದೇಶದವರೆಗೆ ನೀರು ಬಿಡುವಂತೆ ಆದೇಶ ನೀಡಿದೆ.
ಮೇಲ್ಮನವಿ ಅರ್ಜಿಗೆ ಸಂಬಂಧಿಸಿದಂತೆ ಇಂದು ಕೇಂದ್ರ ಸರ್ಕಾರ, ಕರ್ನಾಟಕ, ಪುದುಚೇರಿ, ತಮಿಳುನಾಡು ಹಾಗೂ ಕೇರಳ ರಾಜ್ಯಗಳ ಪರ ವಕೀಲರ ವಾದ ಮಂಡನೆ ಮುಕ್ತಾಯವಾಗಿದ್ದು, ವಾದ, ಪ್ರತಿವಾದ ಆಲಿಸಿದ ಕೋರ್ಟ್ ತೀರ್ಪನ್ನು ಕಾಯ್ದರಿಸಿದೆ.
ನಿನ್ನೆ ಕೇಂದ್ರ ಸರ್ಕಾರದ ಪರವಾಗಿ ವಾದ ಮಂಡಿಸಿದ ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ ಅವರು, ಅಂತಾರಾಜ್ಯ ನದಿ ವಿವಾದ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತದೆ. ಹೀಗಾಗಿ ಮೇಲ್ಮನವಿಗಳ ಅರ್ಜಿಗಳು ವಿಚಾರಣೆಗೆ ಅರ್ಹವಲ್ಲ ಎಂದು ಹೇಳಿದ್ದರು.
ಇನ್ನು ಕರ್ನಾಟಕದ ಪರ ವಾದ ಮಂಡಿಸಿದ ಹಿರಿಯ ವಕೀಲ ಫಾಲಿ ಎಸ್ ನಾರಿಮನ್ ಅವರು, ಕರ್ನಾಟಕದ ಮೇಲ್ಮನವಿ ವಿಚಾರಣೆಗೆ ಯೋಗ್ಯವಾಗಿದೆ ಎಂದಿದ್ದರು. ಅಲ್ಲದೆ ತಮಿಳುನಾಡು ಮತ್ತು ಕೇರಳ ವಕೀಲರು ಸಹ ಮೇಲ್ಮನವಿ ಅರ್ಜಿಗಳು ವಿಚಾರಣೆಗೆ ಯೋಗ್ಯ ಎಂದು ವಾದಿಸಿದವು. ಆದರೆ ಪುದುಚೇರಿ ಮಾತ್ರ ಕೇಂದ್ರ ಸರ್ಕಾರದ ವಾದವನ್ನು ಬೆಂಬಲಿಸಿದೆ.