ನವದೆಹಲಿ: ಬ್ರಿಟಿಷ್ ಸಂಸ್ಥೆಯೊಂದರಿಂದ ಸ್ವೀಕರಿಸಿದ 40 ಮಿಲಿಯನ್ ಅಮೆರಿಕನ್ ಡಾಲರ್ ಸೇರಿದಂತೆ ವಿದೇಶದಲ್ಲಿರುವ ನಿಮ್ಮ ಸಂಪೂರ್ಣ ಆಸ್ತಿಯ ವಿವರ ಬಹಿರಂಗಪಡಿಸುವಂತೆ ಮಂಗಳವಾರ ಸುಪ್ರೀಂ ಕೋರ್ಟ್ ಮದ್ಯದ ದೊರೆ ವಿಜಯ್ ಮಲ್ಯ ಅವರಿಗೆ ಸೂಚಿಸಿದೆ.
ವಿದೇಶಿ ಆಸ್ತಿ ಬಹಿರಂಗ ಕೋರಿ ಬ್ಯಾಂಕ್ ಗಳ ಒಕ್ಕೂಟ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕುರಿಯನ್ ಜೋಸೆಫ್ ಹಾಗೂ ನ್ಯಾಯಮೂರ್ತಿ ರೊಹಿಂಟನ್ ನಾರಿಮನ್ ಅವರನ್ನೊಳಗೊಂಡ ಸುಪ್ರೀಂ ಪೀಠ, ಈ ಹಿಂದೆ ಮಲ್ಯ ಆಸ್ತಿ ವಿವರ ಬಹಿರಂಗ ಪಡಿಸಿದ ರೀತಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ವಿಜಯ್ ಮಲ್ಯ ಅವರು ಭಾರತದಲ್ಲಿರುವ ತಮ್ಮ ಆಸ್ತಿ ವಿವರ ಬಹಿರಂಗಪಡಿಸದಂತೆ ವಿದೇಶಿ ಆಸ್ತಿಯ ಸಂಪೂರ್ಣ ವಿವರವನ್ನು ಬಹಿರಂಗಪಡಿಸುವಂತೆ ಕೋರ್ಟ್ ಸೂಚಿಸಿದೆ.
ಮದ್ಯದ ದೊರೆ ಮಲ್ಯ ಬ್ಯಾಂಕ್ ಗಳಿಗೆ 9 ಸಾವಿರ ಕೋಟಿ ರುಪಾಯಿ ಸಾಲ ಮರುಪಾವತಿಸಬೇಕಾಗಿದೆ. ಮಾರ್ಚ್ ನಲ್ಲಿ ಭಾರತದಿಂದ ತಲೆಮರೆಸಿಕೊಂಡಿದ್ದ ಮಲ್ಯ ಸದ್ಯ ಲಂಡನ್ ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಭಾರತ ಸರ್ಕಾರ ಮಲ್ಯ ಅವರ ಪಾಸ್ ಪೋರ್ಟ್ ಅನ್ನು ರದ್ದುಪಡಿಸಿದೆ. ಅಲ್ಲದೆ ಮುಂಬೈ ಕೋರ್ಟ್ ಮಲ್ಯ ಅವರನ್ನು ಘೋಷಿತ ಅಪರಾಧಿ ಎಂದು ಘೋಷಿಸಿದೆ.