ನವದೆಹಲಿ: ದೇಶಾದ್ಯಂತ ವರುಣ್ ಗಾಂಧಿ ಅವರ ಹನಿ ಟ್ರಾಪ್ ಹಗರಣದ ಕುರಿತು ಭಾರಿ ಚರ್ಚೆಗಳು ಆರಂಭವಾಗಿರುವಂತೆಯೇ ಭಾರತೀಯ ಜನತಾ ಪಕ್ಷ ಮಾತ್ರ ಈ ಪ್ರಕರಣದಿಂದ ಅಂತರ ಕಾಯ್ದುಕೊಳ್ಳಲು ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ.
ವರುಣ್ ಗಾಂಧಿ ವಿರುದ್ಧ ಆರೋಪ ತೀರಾ ಗಂಭೀರ ಸ್ವರೂಪದ್ದಾಗಿದ್ದು, ಇದರಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗುವ ಅಪಾಯವಿದೆ. ಇನ್ನು ಕೆಲವೇ ದಿನಗಳಲ್ಲಿ ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ಇದ್ದು, ಈ ಹಂತದಲ್ಲಿ ವರುಣ್ ಗಾಂಧಿ ವಿರುದ್ಧ ಹನಿ ಟ್ರಾಪ್ ಪ್ರಕರಣ ಕೇಳಿಬಂದಿರುವುದು ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಹೀಗಾಗಿ ಪ್ರಕರಣದಿಂದ ಅಂತರ ಕಾಯ್ದುಕೊಳ್ಳಲು ಬಿಜೆಪಿ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ.
ಈ ಹಿಂದೆ ರಾಷ್ಟ್ಯಾಧ್ಯಕ್ಷ ಅಮಿತ್ ಶಾ ಅವರ ನೇತೃತ್ವದಲ್ಲಿ ನಡೆದ ಬಿಜೆಪಿ ಉನ್ನತ ಮಟ್ಟದ ಸಭೆಯಲ್ಲಿ ಎಲ್ಲ ನಾಯಕರಿಗೆ ನಿರ್ದೇಶನ ನೀಡಲಾಗಿದ್ದು, ಹನಿ ಟ್ರಾಪ್ ಹಗರಣ ಸಂಬಂಧ ಯಾವುದೇ ರೀತಿಯ ಹೇಳಿಕೆ ನೀಡದಂತೆ ಸೂಚನೆ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಅಲ್ಲದೆ ತಮ್ಮ ವಿರುದ್ಧ ಆರೋಪಗಳನ್ನು ವರುಣ್ ಗಾಂಧಿ ಅವರೇ ಏಕಾಂಗಿಯಾಗಿ ಎದುರಿಸಬೇಕು ಎನ್ನುವ ಖಡಕ್ ಸೂಚನೆ ಕೂಡ ಹೈಕಮಾಂಡ್ ನಿಂದ ರವಾನೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಇದೇ ಕಾರಣಕ್ಕೆ ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಲು ಉತ್ತರ ಪ್ರದೇಶ ಬಿಜೆಪಿ ರಾಜ್ಯಾಧ್ಯಕ್ಷರು ನಿರಾಕರಿಸಿದ್ದರು. ವರುಣ್ ಗಾಂಧಿ ಅವರೇ ಆರೋಪಗಳನ್ನು ನಿರಾಕರಿಸುತ್ತಿದ್ದು, ಈ ಸಂಬಂಧ ನಮ್ಮ ಪ್ರತಿಕ್ರಿಯೆ ಅನವಶ್ಯಕ ಎಂದು ಹೇಳುವ ಮೂಲಕ ಜಾರಿಕೊಂಡಿದ್ದರು.