ಬೆಂಗಳೂರು: ಬಹು ವಿವಾದಿತ ಕಾವೇರಿ ನದಿ ನೀರು ಹಂಚಿಕೆ ವಿವಾದ ಕುರಿತಂತೆ ತಮಿಳುನಾಡು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಸೋಮವಾರ ವಿಚಾರಣೆ ನಡೆಸಲಿದೆ.
ಕರ್ನಾಟಕದಲ್ಲಿ ಪ್ರಸ್ತುತ ವರ್ಷ ಮುಂಗಾರು ಮಳೆಯ ಅಭಾವ ಉಂಟಾಗಿದ್ದು, ತಮಿಳುನಾಡಿಗೆ ಪಾಲಿನಷ್ಟು ನೀರನ್ನು ಬಿಡಲು ಸಾಧ್ಯವಿಲ್ಲ ಎಂದು ಈ ಹಿಂದೆ ರಾಜ್ಯ ಸರ್ಕಾರ ಸ್ಪಷ್ಟ ಪಡಿಸಿತ್ತು. ಈ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದ ತಮಿಳುನಾಡು ಕೆಆರ್ ಎಸ್ ನಿಂದ 50 ಟಿಎಂಸಿ ಅಡಿ ನೀರು ಬೇಕೆಂದು ಹೇಳಿ ಸುಪ್ರೀಂನಲ್ಲಿ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯನ್ನು ಸುಪ್ರೀಂಕೋರ್ಟ್ ಇಂದು ವಿಚಾರಣೆ ನಡೆಸಲಿದೆ.
ಕಾವೇರಿ ವಿವಾದ ಕುರಿತಂತೆ ಈ ಹಿಂದೆ ಕರ್ನಾಟಕಕ್ಕೆ ಸೂಚನೆ ನೀಡಿದ್ದ ಸುಪ್ರೀಂ, ಬದುಕಿ ಬದುಕಲು ಬಿಡಿ ಎಂದು ಹೇಳಿತ್ತು. ಇಂದು ನಡೆಯಲಿರುವ ವಿಚಾರಣೆ ವೇಳೆ ಸರ್ಕಾರ ರಾಜ್ಯದಲ್ಲಿ ಎದುರಾಗಿರುವ ಹಾಗೂ ಎದುರಾಗಲಿರುವ ಸಂಕಷ್ಟದ ವರದಿ ಪಟ್ಟಿಯನ್ನು ಸುಪ್ರೀಂ ಬಳಿ ಸಲ್ಲಿಸಲಿದೆ. ಉಭಯ ರಾಜ್ಯಗಳ ವಾದ ಹಾಗೂ ಪ್ರತಿವಾದಗಳನ್ನು ಆಲಿಸಿದ ಬಳಿಕ ಸುಪ್ರೀಂ ಯಾವ ರೀತಿಯ ನಿರ್ಣಯ ಕೈಗೊಳ್ಳಲಿದೆ ಎಂಬುದು ಇಂದು ಸ್ಪಷ್ಟವಾಗಲಿದೆತ.
ಈ ಬಾರಿ ಮಳೆಯ ಕೊರತೆ ಎಂದುರಾಗಿರುವುದರಿಂದ ರಾಜ್ಯದ ಹಲವು ಜಲಾಶಯಗಳು ಭರ್ತಿಯಾಗಿಲ್ಲ. ಪ್ರಸ್ತುತ ಒಟ್ಟಾರೆ ಎಲ್ಲಾ ಜಲಾಶಯಗಳಲ್ಲೂ ಸೇರಿ 51 ಟಿಎಂಸಿ ಅಡಿ ನೀರು ಮಾತ್ರ ಸಂಗ್ರಹವಿದೆ. ಇದರಲ್ಲಿ ಬೆಂಗಳೂರು ನಗರಕ್ಕೆ 40 ಟಿಎಂಸಿ ಅಡಿ ಕುಡಿಯುವ ನೀರಿನ ಅಗತ್ಯವಿದೆ. ಇಂತಹ ಸಂಕಷ್ಟಕರ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಹರಿಸುವ ಪರಿಸ್ಥಿತಿಯಲ್ಲಿ ಕರ್ನಾಟಕ ಇಲ್ಲ ಎಂದು ಸುಪ್ರೀಂಗೆ ಸರ್ಕಾರ ಮನವರಿಕೆ ಮಾಡಿಕೊಡಲಿದೆ.