ಬೆಂಗಳೂರು: ಸುಪ್ರೀಂ ಆದೇಶದಂತೆ ತಮಿಳುನಾಡಿಗೆ ನೀರು ಹರಿಸಿ ರೈತರ ಆಕ್ರೋಶಕ್ಕೆ ಗುರಿಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೃಷಿಗೆ ನೀರು ಒದಗಿಸುವುದಾಗಿ ಬುಧವಾರ ಭರವಸೆ ನೀಡಿದ್ದಾರೆ.
ಈ ಕುರಿತಂತೆ ನಗರದಲ್ಲಿ ನಡೆದ ಮಾಧ್ಯಮ ಸಂಪಾದಕರೊಂದಿಗಿನ ಸಂವಾದದಲ್ಲಿ ಮಾತನಾಡಿರುವ ಅವರು, ಸುಪ್ರೀಂ ಆದೇಶ ಪಾಲಿಸುವುದನ್ನು ಬಿಟ್ಟು ರಾಜ್ಯಕ್ಕೆ ಬೇರಾದುವುದೇ ದಾರಿಯಿಲ್ಲ. ಪ್ರಸ್ತುತ ಕುಡಿಯುವ ನೀರಿಗೆ ಕೊರತೆಯಿಲ್ಲ, ರೈತರ ಕೃಷಿಗೆ ನೀರನ್ನು ಒದಗಿಸಲಾಗುತ್ತದೆ ಎಂದು ಹೇಳಿದ್ದಾರೆ.
ಇದೇ ವೇಳೆ ಕಾವೇರಿ ವಿವಾದ ಕುರಿತಂತೆ ಸುಪ್ರೀಂ ನಲ್ಲಿ ಕರ್ನಾಟಕದ ಪರವಾಗಿ ವಾದ ಮಂಡಿಸಿದ್ದ ಎಫ್.ಎಸ್ ನಾರೀಮನ್ ಅವರನ್ನು ಸಮರ್ಥಿಸಿಕೊಂಡಿರುವ ಅವರು, ಸೆಪ್ಟೆಂಬರ್ 5ರಂದು ಸುಪ್ರೀಂ ಹೊರಡಿಸಿದ್ದ ಆದೇಶ ತಮಿಳುನಾಡು ಪರವಾಗಿತ್ತು. ವಾದ ಮಂಡನೆ ವೇಳೆ ನಾರೀಮನ್ ಅವರು ತಮಿಳುನಾಡಿಗೆ ನೀರು ಬಿಡುವುದೇ ಇಲ್ಲ ಎಂದು ಹೇಳಿರಲಿಲ್ಲ. 10 ಸಾವಿರ ಕ್ಯೂಸೆಕ್ಸ್ ನೀರನ್ನು 6 ದಿನಗಳ ಬಿಡುಗಡೆ ಮಾಡಲು ಕರ್ನಾಟಕ ಸಿದ್ಧವಿದೆ ಎಂದು ಹೇಳಿದ್ದರು. ಆದರೆ, ಸುಪ್ರೀಂ 10 ದಿನಗಳ ಕಾಲ 15 ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡುವಂತೆ ಆದೇಶ ಹೊರಡಿಸಿತು.
ಈ ಹಿಂದೆ ಬಿಜೆಪಿ ಅಧಿಕಾರಾವಧಿಯಲ್ಲಿಯೂ ಕೂಡ ತಮಿಳುನಾಡಿಗೆ ನೀರನ್ನು ಬಿಡುಗಡೆ ಮಾಡಲಾಗಿತ್ತು. ನಿರ್ಧಾರ ಕೈಗೊಳ್ಳುವುದಕ್ಕೂ ಮುನ್ನ ಪ್ರತಿಪಕ್ಷಗಳನ್ನು ಸಂಪರ್ಕಿಸಿರಲಿಲ್ಲ. ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದ ಎಸ್.ಎಂ. ಕೃಷ್ಣ ಮತ್ತು ದೇವೇಗೌಡ ಅವರೂ ಕೂಡ ಸುಪ್ರೀಂ ಆದೇಶವನ್ನು ಪಾಲಿಸಿದ್ದರು. ಈ ಬಾರಿ ಕೂಡ ಸುಪ್ರೀಂ ಆದೇಶವನ್ನು ಪಾಲಿಸುವುದನ್ನು ಬಿಟ್ಟು ನಮಗೆ ಬೇರೆ ದಾರಿಯಿರಲಿಲ್ಲ.
ವಿವಾದ ಕುರಿತಂತೆ ಕಾವೇರಿ ಮೇಲ್ವಿಚಾರಣಾ ಸಮಿತಿಯನ್ನು ಶೀಘ್ರದಲ್ಲೇ ಸಂಪರ್ಕಿಸಲಾಗುತ್ತದೆ. ನಂತರ ಆದೇಶ ಮರುಪರಿಶೀಲಿಸುವಂತೆ ಕೋರಿ ಸುಪ್ರೀಂ ಬಳಿ ಮತ್ತೆ ಮನವಿ ಮಾಡಿಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
ಪ್ರಸ್ತುತ ವರ್ಷದಲ್ಲಿ ಮುಂಗಾರು ಮಳೆಯ ಕೊರತೆಯುಂಟಾಗಿದ್ದು, ರಾಜ್ಯದಲ್ಲಿ ಸಂಕಷ್ಟದ ಪರಿಸ್ಥಿತಿ ಎದುರಾಗುವಂತಾಗಿದೆ. ಈ ಬಾರಿ ಕೇವಲ ಶೇ.47 ರಷ್ಟು ಮಾತ್ರ ಮಳೆಯಾಗಿದೆ. ರಾಜ್ಯದ ನಾಲ್ಕು ಜಲಾಶಯಗಳಲ್ಲಿ ನೀರಿನ ಪ್ರಮಾಣ ಅತ್ಯಂತ ಕಡಿಮೆಯಿದೆ. 114 ಟಿಎಂಸಿಯಷ್ಟಿರಬೇಕಿದ್ದ ನೀರು ಇಂದು ಕೇವಲ 46.7 ಟಿಎಂಸಿಯಷ್ಟಿದೆ. ಆಗಸ್ಟ್ ಅಂತ್ಯದೊಳಗಾಗಿ ಕರ್ನಾಟಕ 94 ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡಬೇಕಿತ್ತು. ಆದರೆ, ನೀರಿನ ಅಭಾವದಿಂದಾಗಿ ಸೆಪ್ಟೆಂಬರ್ 5 ರವರೆಗೂ 36 ಟಿಎಂಸಿ ನೀರನ್ನಷ್ಟೇ ಬಿಡುಗಡೆ ಮಾಡಲಾಗಿದೆ.
ಬೆಂಗಳೂರು, ಮೈಸೂರು, ಮಂಡ್ಯ ಹಾಗೂ ರಾಜ್ಯದ ಇನ್ನಿತರೆ ಜಿಲ್ಲೆಗಳಿಗೆ ಕೇವಲ ಕುಡಿಯುವುದಕ್ಕೇ 28 ಟಿಎಂಸಿ ನೀರಿನ ಅಗತ್ಯವಿದೆ. ಇನ್ನು ಕೃಷಿ ಬಳಕೆಗೆ 47 ಟಿಎಂಸಿಯಷ್ಟು ನೀರಿನ ಅಗತ್ಯವಿದೆ. ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಮಳೆಯಾಗಿ ಸಮಸ್ಯೆ ಬಗೆಹರಿಯುವ ವಿಶ್ವಾಸವಿದೆ ಎಂದು ಅವರು ತಿಳಿಸಿದ್ದಾರೆ.