ಜೆ ಎನ್ ಯು ಎಸ್ ಯು ಚುನಾವಣಾ ಗೆದ್ದ ಸಂಭ್ರಮದಲ್ಲಿ ಎ ಐ ಎಸ್ ಎ-ಎಸ್ ಎಫ್ ಐ ಮೈತ್ರಿ
ನವದೆಹಲಿ: ಜೆ ಎನ್ ಯು ವಿದ್ಯಾರ್ಥಿ ಸಂಘಟನೆ ಚುನಾವಣೆಯಲ್ಲಿ ಎಡ ಪಕ್ಷಗಳ ಮೈತ್ರಿ ಜಯಭೇರಿ ಭಾರಿಸಿದ್ದು, ಆರ್ ಎಸ್ ಎಸ್ ಬೆಂಬಲಿತ ವಿದ್ಯಾರ್ಥಿ ಸಂಘಟನೆ ಅಖಿಲ ಭಾರತ ವಿದ್ಯಾರ್ಥಿ ಪರಿಷದ್ ತೀವ್ರ ಮುಜುಗರ ಅನುಭವಿಸಿದೆ. ದೆಹಲಿ ವಿಶ್ವವಿದ್ಯಾಲಯದ ಚುನಾವಣೆಗಳಲ್ಲಿ ಮೂರು ಸ್ಥಾನ ಗಳಿಸಿದ್ದ ಎಬಿವಿಪಿ, ಜೆ ಎನ್ ಯು ನಲ್ಲಿ ಖಾತೆ ತೆರೆಯಲು ವಿಫಲವಾಗಿದೆ.
ಕಳೆದ ವರ್ಷ ಜೆ ಎನ್ ಯು ನಲ್ಲಿ ಜಂಟಿ ಕಾರ್ಯದರ್ಶಿ ಸ್ಥಾನವನ್ನು ಗೆಲ್ಲಲು ಎಬಿವಿಪಿಗೆ ಸಾಧ್ಯವಾಗಿತ್ತು. ಆದರೆ ಈ ವರ್ಷ ಎಡ ಪಕ್ಷಗಳ ಬೆಂಬಲಿತ ಅಖಿಲ ಭಾರತ ವಿದ್ಯಾರ್ಥಿ ಸಂಘ (ಎ ಐ ಎಸ್ ಎ) ಮತ್ತು ಭಾರತೀಯ ವಿದ್ಯಾರ್ಥಿ ಫೆಡೆರೇಶನ್ (ಎಸ್ ಎಫ್ ಐ) ಮೈತ್ರಿ ಆರ್ ಎಸ್ ಎಸ್ ಬೆಂಬಲಿತ ಸಂಘಟನೆಯ ಎಲ್ಲ ಭರವಸೆಗಳನ್ನು ಮಣ್ಣುಮುಕ್ಕಿಸಿದೆ.
ಹಾಗೆಯೇ ಈ ಮೈತ್ರಿ 31 ಕೌನ್ಸಿಲ್ಲರ್ ಸ್ಥಾನಗಳಲ್ಲಿ 30 ಸ್ಥಾನಗಳನ್ನು ಗೆದ್ದು, ಎಬಿವಿಪಿಗೆ ಸಂಸ್ಕೃತ ವಿಭಾಗದಿಂದ ಮಾತ್ರ ಒಂದು ಕೌನ್ಸಿಲ್ಲರ್ ಸ್ಥಾನವನ್ನು ಗೆಲ್ಲಲು ಸಾಧ್ಯವಾಗಿದೆ.
ಎಡ ಮೈತ್ರಿಗೆ ತೀವ್ರ ಪೈಪೋಟಿ ನೀಡಿರುವ ಬಿಸ್ರಾ ಅಂಬೇಡ್ಕರ್ ಫುಲೆ ವಿದ್ಯಾರ್ಥಿಗಳ ಸಂಘ (ಬಿ ಎ ಪಿ ಎಸ್ ಎ) ವಿದ್ಯಾರ್ಥಿ ಸಂಘದ ಅಧ್ಯಕ್ಷೀಯ ಸ್ಥಾನದಲ್ಲಿ ಎರಡನೇ ಸ್ಥಾನದಲ್ಲಿ ಹೊರಹೊಮ್ಮಿದೆ.
ಎಡ ಮೈತ್ರಿಯ ಮೋಹಿತ್ ಪಾಂಡೆ 1800 ಮತಗಳೊಂದಿಗೆ ಅಧ್ಯಕ್ಷ ಸ್ಥಾನವನ್ನು ಗೆದ್ದಿದ್ದಾರೆ, ಅಮಲ್ ಪುಲ್ಲರ್ಕ್ಕತ್ ಉಪಾಧ್ಯಕ್ಷ, ಸತರೂಪ ಚಕ್ರವರ್ತಿ ಮತ್ತು ತರ್ಬೆಜ್ ಹಸನ್ ಪ್ರಧಾನ ಮತ್ತು ಜಂಟಿ ಕಾರ್ಯದರ್ಶಿ ಸ್ಥಾನಗಳಿಗೆ ಆಯ್ಕೆಯಾಗಿದ್ದಾರೆ.
ಇಲ್ಲಿಯವರೆಗೂ ಜೆ ಎನ್ ಯು ಎಸ್ ಯುನ ಅಧ್ಯಕ್ಷರಾಗಿ ಹಲವು ಘಟನೆಗಳಿಗೆ ಸಾಕ್ಷಿಯಾದ ಕನ್ಹಯ್ಯ ಕುಮಾರ್ ತಮ್ಮ ಉತ್ತರಾಧಿಕಾರಿಗೆ ಅಭಿನಂದಿಸಿದ್ದು "ದೇಶಕ್ಕೆ ಗೊತ್ತಾಗಬೇಕು.. ಎಬಿವಿಪಿ ಮತ್ತು ಜೆ ಎನ್ ಯು ಎಸ್ ಯು ಚುನಾವಣೆಗೆ ಏನಾಯಿತು ಎಂದು, ಜೆ ಎನ್ ಯು ಮುಚ್ಚಿಸಿ ಎಂಬುದು ಈಗ ಎಬಿವಿಪಿ ಮುಚ್ಚಿಸಿ ಘೋಷಣೆಗೆ ತಿರುಗಿದೆ" ಎಂದು ವ್ಯಂಗ್ಯ ಮಾಡಿ ಟ್ವೀಟ್ ಮಾಡಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos