ನವದೆಹಲಿ: ಸುಪ್ರೀಂ ಕೋರ್ಟ್ ಆದೇಶದಂತೆ ತಮಿಳುನಾಡಿಗೆ ನೀರು ಬಿಡಲಾಗಿದ್ದು, ಪ್ರಸ್ತುತ ಜಲಾಶಯಗಳಲ್ಲಿ ಅಳಿದುಳಿದಿರುವ ನೀರನ್ನು ಉಳಿಸಿಕೊಳ್ಳಲು ಸೋಮವಾರ ನಡೆಯುವ ಮೇಲುಸ್ತುವಾರಿ ಸಭೆಯಲ್ಲಿ ಕರ್ನಾಟಕ ಪ್ರಯತ್ನಿಸಲಿದೆ.
ಇಂದು ನವದೆಹಲಿಯ ಶ್ರಮಶಕ್ತಿ ಭವನದಲ್ಲಿ ಕಾವೇರಿ ಮೇಲುಸ್ತುವಾರಿ ಸಭೆ ನಡೆಯಲಿದ್ದು, ಸಭೆಯಲ್ಲಿ ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳು ನೀರಿಗಾಗಿ ತಮ್ಮ ವಾದ ಮಂಡಿಸಲಿವೆ. ಪ್ರಸ್ತುತ ನೀರು ಬಿಡಲಾಗುತ್ತಿದೆಯಾದರೂ ಸಾಂಬಾ ಬೆಳೆಗೆ ಮತ್ತಷ್ಟು ನೀರಿನ ಅವಶ್ಯಕತೆ ಇದೆ ಎಂಬುದು ತಮಿಳುನಾಡಿನ ವಾದವಾಗಿದ್ದು, ಕುಡಿಯುವ ನೀರಿನ ಸಮಸ್ಯೆ ನಡುವೆಯೂ ಸುಪ್ರೀಂ ಕೋರ್ಟ್ ಆದೇಶದಂತೆ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ. ಪ್ರಸ್ತುತ ಕರ್ನಾಟಕದ ಜಲಾಶಯಗಳ ಬರಿದಾಗ ತೊಡಗಿವೆ. ಹೀಗಾಗಿ ರಾಜ್ಯದ ಜನತೆಯ ಕುಡಿಯುವ ನೀರಿಗಾಗಿ ಈಗ ಅಳಿದುಳಿದಿರುವ ನೀರನ್ನೇ ಅವಲಂಭಿಸಬೇಕಿದೆ. ತಮಿಳುನಾಡಿಗೆ ನೀರು ಹರಿಸಲು ಸಾಧ್ಯವಿಲ್ಲ ಎಂಬುದು ಕರ್ನಾಟಕದ ವಾದವಾಗಿದೆ.
ಕಾವೇರಿ ಜಲಾಶಯಗಳಲ್ಲಿ ನೀರಿನ ಪ್ರಮಾಣ 28 ಟಿಎಂಸಿ ಪ್ರಮಾಣಕ್ಕೆ ಕುಸಿದಿದ್ದು, ಮುಂದಿನ ಜೂನ್‌ವರೆಗೆ ಈ ನೀರನ್ನೇ ಕಾವೇರಿ ಕೊಳ್ಳದ ಜನರ ಕುಡಿಯುವ ಉದ್ದೇಶಕ್ಕೆ ಬಳಸಿಕೊಳ್ಳಬೇಕೆಂಬ ವಿಚಾರವನ್ನು ಮೇಲುಸ್ತುವಾರಿ ಸಮಿತಿಯ ಮುಂದಿಟ್ಟು ತಮಿಳುನಾಡಿಗೆ ಮತ್ತಷ್ಟು ನೀರು ಬಿಡಲು ಸಾಧ್ಯವೇ ಇಲ್ಲ ಎಂಬ ನಿಲುವನ್ನು ಪ್ರಕಟಿಸಲು ಕರ್ನಾಟಕ ಸರ್ಕಾರ ಸಜ್ಜಾಗಿದೆ.
"ಈಗಿರುವ ನೀರನ್ನು ನೀರಾವರಿ ಉದ್ದೇಶಕ್ಕೆ ಬಳಸಲು ಸಾಧ್ಯವೇ ಇಲ್ಲ. ಈಶಾನ್ಯ ಮುಂಗಾರು ಮಳೆ ಬಗ್ಗೆ ಸ್ಪಷ್ಟತೆ ಇಲ್ಲ. ಇಂಥ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಹರಿಸಲು ಖಂಡಿತ ಸಾಧ್ಯವಿಲ್ಲ. ಒಂದು ವೇಳೆ ನೀರು ಬಿಡಿ ಎಂದು ಹೇಳಿದರೆ ಕರ್ನಾಟಕದ ಕಾವೇರಿ ಕಣಿವೆ ಅತಿ ದೊಡ್ಡ ಜಲಗಂಡಾಂತರ ಎದುರಿಸಬೇಕಾಗುತ್ತದೆ. ಇದು ಬೇರೆ ಬಿಕ್ಕಟ್ಟುಗಳಿಗೂ ಕಾರಣವಾಗಬಹುದು" ಎಂಬ ಅಂಶವನ್ನು ರಾಜ್ಯದ ಮುಖ್ಯ ಕಾರ್ಯದರ್ಶಿ ಮೇಲುಸ್ತುವಾರಿ ಸಮಿತಿ ಮುಖ್ಯಸ್ಥ ಶಶಿಶೇಖರ್‌ಗೆ ವಿವರಿಸಲಿದ್ದಾರೆ.
ಇಂದಿನ ಸಭೆ ತೀರ್ಮಾನದ ಮೇಲೆ ನಾಳಿನ ಸುಪ್ರೀಂ ತೀರ್ಪು ಆಧಾರ
ಇದೇ ವೇಳೆ ಇಂದಿನ ಕಾವೇರಿ ಮೇಲುಸ್ತುವಾರಿ ಸಭೆ ಬಳಿಕ ನಾಳೆ ಸುಪ್ರೀಂ ಕೋರ್ಟ್ ನಲ್ಲಿಯೂ ಕಾವೇರಿ ವಿಚಾರ ವಿಚಾರಣೆಗೆ ಬರಲಿದ್ದು, ಇಂದಿನ ಕಾವೇರಿ ಮೇಲುಸ್ತುವಾರಿ ಸಮಿತಿ ಸಭೆಯಲ್ಲಿನ ತೀರ್ಮಾನಗಳು ನಾಳಿನ ಸುಪ್ರೀಂಕೋರ್ಟ್ ವಿಚಾರಣೆಯಲ್ಲಿ ಮಹತ್ವ ಪಡೆಯಲಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಇಂದಿನ ಕಾವೇರಿ ಮೇಲುಸ್ತುವಾರಿ ಸಮಿತಿ ಸಭೆ ಕರ್ನಾಟಕದ ಪಾಲಿಗೆ ನಿರ್ಣಾಯಕವಾಗಿರಲಿದೆ.
ಜಲಾಶಯಗಳ ಈಗಿನ ಪರಿಸ್ಥಿತಿ ಕುರಿತು ಮಾಹಿತಿ ಪರಿಶೀಲಿಸಿದ ಸಮಿತಿ
ಇನ್ನು ತಮಿಳುನಾಡಿಗೆ ನೀರು ಬಿಡುವ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳು ನೀಡಿರುವ ವರದಿಗಳನ್ನು ಮೇಲುಸ್ತುವಾರಿ ಸಮಿತಿ ಪರಿಶೀಲಿಸಿದೆ. ಮಳೆ ಪ್ರಮಾಣ, ಆಣೆಕಟ್ಟೆಗಳಿಗೆ ನೀರಿನ ಹರಿವು, ಕೃಷಿಗೆ ಬೇಕಿರುವ ನೀರಿನ ಪ್ರಮಾಣ ಮತ್ತಿತರ ಅಂಶಗಳನ್ನು ಕರ್ನಾಟಕ ಸರ್ಕಾರದ ವರದಿಯಲ್ಲಿ ಉಲ್ಲೇಖಿದ್ದು, ತಮಿಳುನಾಡು ಸರ್ಕಾರ ಕಾವೇರಿ ತೀರದ ಕೃಷಿಕರಿಗೆ ಅಗತ್ಯವಿರುವ ನೀರಿನ ಪ್ರಮಾಣದ ಬಗ್ಗೆ ವರದಿ ನೀಡಿದೆ. ಈ ಎಲ್ಲ ಅಂಶಗಳ ಬಗ್ಗೆ ಕೇಂದ್ರ ಜಲಸಂಪನ್ಮೂಲ ಸಚಿವಾಲಯ ಹಾಗೂ ಕೇಂದ್ರ ಜಲ ಆಯೋಗದ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಸೆಪ್ಟೆಂಬರ್ 12ರಂದು ಈ ಮಾಹಿತಿ ಒದಗಿಸುವಂತೆ ಮೇಲುಸ್ತುವಾರಿ ಸಮಿತಿ ರಾಜ್ಯಗಳಿಗೆ ಸೂಚಿಸಿತ್ತು. ಸಮಿತಿ ಯಾವುದೇ ದುಡುಕಿನ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಒಂದು ವೇಳೆ ಆಣೆಕಟ್ಟಿನಲ್ಲಿ ನಿಗದಿತ ಪ್ರಮಾಣಕ್ಕಿಂತ ಕಡಿಮೆ ನೀರಿದೆ ಎಂಬ ಅಂಶ ಮನದಟ್ಟಾದರೆ ತೀರ್ಪು ಮುಂದೂಡುವ ಸಾಧ್ಯತೆಯೂ ಇದೆ ಎಂದು ಸಮಿತಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
29 ವರ್ಷದಲ್ಲಿ ಕನಿಷ್ಠ ಮಟ್ಟಕ್ಕೆ
ತಮಿಳುನಾಡಿಗೆ ಸತತ ನೀರು ಹರಿಸಿದ ಪರಿಣಾಮ ಕೆಆರ್ ಎಸ್ ಅಣೆಕಟ್ಟೆಯ ನೀರಿನ ಪ್ರಮಾಣ 29 ವರ್ಷಗಳಲ್ಲೇ ಇದೇ ಮೊದಲ ಬಾರಿಗೆ ಅತ್ಯಂತ ಕನಿಷ್ಠ 84.30 ಅಡಿಗೆ ಕುಸಿದಿದೆ. ಕಟ್ಟೆಯಿಂದ 9,720 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಮಳೆಯಾಗದಿದ್ದರೂ ಹಾರಂಗಿ ಹಾಗೂ ಹೇಮಾವತಿಯಿಂದ ನೀರು ಬಿಟ್ಟಿರುವ ಪರಿಣಾಮ 7,271 ಕ್ಯೂಸೆಕ್ ನೀರು ಅಣೆಕಟ್ಟೆಗೆ ಬರುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.