ಪ್ರಧಾನ ಸುದ್ದಿ

ರಾಮ್ ಕುಮಾರ್ ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಆಗಮಿಸಿದ ನ್ಯಾಯಾಂಗ ಮೆಜೆಸ್ಟ್ರೇಟ್

Guruprasad Narayana
ಚೆನ್ನೈ: ಟೆಕ್ಕಿ ಸ್ವಾತಿ ಕೊಲೆ ಆರೋಪಿ ರಾಮಕುಮಾರ್ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಜೈಲು ಸಿಬ್ಬಂದಿ ಆರೋಪಿಸಿದ್ದು, ಈಗ ಮರಣೋತ್ತರ ಪರೀಕ್ಷೆ ರಾಯಪೇಟ್ಟ ಸರ್ಕಾರಿ ಆಸ್ಪತ್ರೆಯಲ್ಲಿ ನಡೆಯಬೇಕಿದ್ದು ಅಲ್ಲಿಗೆ ನ್ಯಾಯಾಂಗ ಮೆಜೆಸ್ಟ್ರೇಟ್ ತಮಿಳ್ ಸೆಲ್ವಿ ಆಗಮಿಸಿದ್ದಾರೆ. 
ಮೆಜೆಸ್ಟ್ರೇಟ್ ಅವರ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಯಲಿದೆ ಎನ್ನಲಾಗಿದೆ ಹಾಗೆಯೇ ರಾಮಕುಮಾರ್ ಪೋಷಕರು ಕೂಡ ಆಸ್ಪತ್ರೆಗೆ ಆಗಮಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.
ಭಾನುವಾರ ಪುಝಲ್ ಜೈಲಿನಲ್ಲಿ ಆರೋಪಿ ರಾಮ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಆರೋಪಿಸಿದ್ದರು. 
ರಾಮಕುಮಾರ್ ಜೈಲಿನಲ್ಲಿದ್ದ ಒಂದು ವಿದ್ಯುಚ್ಛಕ್ತಿ ಸ್ವಿಚ್ ಬೋರ್ಡ್ ನಿಂದ ವೈರ್ ಎಳೆದು ಅದನ್ನು ಕಚ್ಚಿ ಸಂಜೆ ಸುಮಾರು 4:30 ಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಜೈಲಿನ ಮೂಲಗಳು ತಿಳಿಸಿವೆ. 
ಪ್ರಾಥಮಿಕ ತನಿಖೆ ನಡೆಸಿದ ವೈದ್ಯರು, ಆರೋಪಿಯ ಗಲ್ಲ ಮತ್ತು ಎದೆಯ ಎಡ ಭಾಗಕ್ಕೆ ವಿದ್ಯುಚ್ಛಕ್ತಿ ಶಾಕ್ ಗಾಯಗಳಾಗಿವೆ ಎಂದು ಹೇಳಿದ್ದಾರೆ. ಈ ಪ್ರಕರಣದ ಬಗ್ಗೆ ಜೈಲರ್ ಜಯರಾಮ್, ಪುಝಲ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. 
ಆರೋಪಿಸಲಾಗಿರುವ ಆತ್ಮಹತ್ಯೆ ನಡೆದಾಗ ಜೈಲು ಕೊಠಡಿಯಲ್ಲಿ ಬೇರೆ ಯಾರು ಇರಲಿಲ್ಲ ಎನ್ನಲಾಗಿದೆ. ನಂತರ ರಕ್ಷಣೆಗಾಗಿ ಭದ್ರತಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದರು, ಆಸ್ಪತ್ರೆಗೆ ಧಾವಿಸುವ ಮಾರ್ಗಮಧ್ಯದಲ್ಲೇ ರಾಮ್ ಕುಮಾರ್ ಮೃತಪಟ್ಟಿದ್ದಾನೆ ಎನ್ನಲಾಗಿದೆ. 
"ರಾಮಕುಮಾರ್ ಅವರನ್ನು ಸುಮಾರು 5:40 ಕ್ಕೆ ಇಲ್ಲಿಗೆ ತರಲಾಯಿತು ಆದರೆ ಆ ವೇಳೆಗೆ ಅವರು ಮೃತಪಟ್ಟಿದ್ದರು" ಎಂದು ಆಸ್ಪತ್ರೆ ಅಧಿಕಾರಿಯೊಬ್ಬರು ಹೇಳಿದ್ದಾರೆ. 
ಈ ಮಧ್ಯೆ ರಾಮ್ ಕುಮಾರ್ ಕುಟುಂಬ, ಇದು ಪೊಲೀಸ್ ಅಧಿಕಾರಿಗಳು ನಡೆಸಿರುವ ಕೊಲೆ ಎಂದು ಆರೋಪಿಸಿದ್ದಾರೆ. 
SCROLL FOR NEXT