ಕಾಶ್ಮೀರದಲ್ಲಿ ಪೆಲ್ಲೆಟ್ ಗನ್ ನಿಂದ ಗಾಯಗೊಂಡ ವ್ಯಕ್ತಿ
ಶ್ರೀನಗರ: ಕಾಶ್ಮೀರ ಕಣಿವೆಯಲ್ಲಿ ಪ್ರತಿಭಟನೆಗಳನ್ನು ಹತ್ತಿಕ್ಕಲು ಬಳಸುವ ಪೆಲ್ಲೆಟ್ ಗನ್ ಗಳ ಬಳಕೆಯ ನಿಷೇಧ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ನಿರಾಕರಿಸಿದ್ದು, ಗುಂಪುಗಳು ಹಿಂಸೆ ನಿಲ್ಲಿಸದ ತನಕ ಬಲಪ್ರಯೋಗ ಅವಶ್ಯಕ ಎಂದು ಅಭಿಪ್ರಾಯಪಟ್ಟಿದೆ.
ಮುಖ್ಯ ನ್ಯಾಯಾಧೀಶ ಎನ್ ಪೌಲ್ ವಸಂತಕುಮಾರ್ ಮತ್ತು ನ್ಯಾಯಾಧೀಶ ಅಲಿ ಮೊಹಮದ್ ಮಗ್ರೇಯ್ ಒಳಗೊಂಡ ಪೀಠ, ಪೆಲ್ಲೆಟ್ ಗನ್ ಬಳಸಿದ ಮತ್ತು ಬಳಸಲು ಹೇಳಿದ ಅಧಿಕಾರಿಗಳಿಗೆ ಶಿಕ್ಷೆ ನೀಡಬೇಕೆಂಬ ಅರ್ಜಿಯನ್ನು ಕೂಡ ತಳ್ಳಿಹಾಕಿದೆ. ಆದರೆ ಇದರಿಂದ ಗಾಯಗೊಂಡವರಿಗೆ ಅಗತ್ಯ ವೈದ್ಯಕೀಯ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಆದೇಶಿಸಿದೆ.
"ಈಗಿನ ಪರಿಸ್ಥಿತಿಯನ್ನು ಅವಲೋಕಿಸಿ ಮತ್ತು ಭಾರತ ಸರ್ಕಾರ ಹಾಗು ಗೃಹ ಇಲಾಖೆ ಪೆಲ್ಲೆಟ್ ಗನ್ ಗಳ ಬಳಕೆಯ ಸಾಧು-ಅಸಾಧುವಿನ ಬಗ್ಗೆ ಪರಿಹಾರ ಕಂಡುಹಿಡಿಯಲು ಈಗಾಗಲೇ ತಜ್ಞರ ಸಮಿತಿ ರಚಿಸಿರುವುದರಿಂದ, ಈ ಸಮಿತಿ ವರದಿ ಸಲ್ಲಿಸುವುದಕ್ಕೂ ಮುಂಚಿತವಾಗಿ ತೀವ್ರ ಮತ್ತು ವಿರಳ ಸನ್ನಿವೇಶಗಳಲ್ಲಿ ಪೆಲ್ಲೆಟ್ ಗನ್ ಗಳನ್ನು ಬಳಸಿದರಲು ಆದೇಶ ನೀಡುವುದಕ್ಕೆ ಬರುವುದಿಲ್ಲ" ಎಂದು ಕೋರ್ಟ್ ಬುಧವಾರ ಹೇಳಿದೆ.
ಕಾಶ್ಮೀರ ಹೈಕೋರ್ಟ್ ಬಾರ್ ಅಸೋಸಿಯೇಷನ್ ಸಲ್ಲಿಸಿದ್ದ ಅರ್ಜಿಯನ್ನು ಈ ನ್ಯಾಯಪೀಠ ವಿಚಾರಣೆಗೆ ಒಳಪಡಿಸಿತ್ತು.