ಬೆಂಗಳೂರು: ಕಾವೇರಿ ವಿವಾದ ಸಂಬಂಧ ನಾಳೆ ಕೇಂದ್ರ ಸರ್ಕಾರ ಕರೆದಿರುವ ಕರ್ನಾಟಕ-ತಮಿಳುನಾಡು ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯ ನಂತರ ನೀರು ಬಿಡುವ ಬಗ್ಗೆ ನಿರ್ಧರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಹೇಳಿದ್ದಾರೆ.
ತಮಿಳುನಾಡಿಗೆ ಮತ್ತೆ ಮೂರು ದಿನಗಳ ಕಾಲ ನೀರು ಬಿಡಬೇಕೆಂಬ ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಇಂದು ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಿಎಂ, ಪ್ರಸ್ತುತ ನಮ್ಮ ಜಲಾಶಯಗಳಲ್ಲಿ ಸಂಗ್ರಹಿಸಿರುವ ನೀರು ಕುಡಿಯಲು ಮಾತ್ರ ಎಂದು ಸೆಪ್ಟೆಂಬರ್ 23ರಂದು ಸದನದಲ್ಲಿ ನಿರ್ಣಯ ಕೈಗೊಡಿದ್ದೇವೆ. ಹೀಗಾಗಿ ಸದ್ಯಕ್ಕೆ ತಮಿಳುನಾಡಿಗೆ ನೀರು ಬಿಡುವುದಿಲ್ಲ ಎಂದರು.
ಇಂದು ಬೆಳಗ್ಗೆ ನಡೆದ ಸರ್ವಪಕ್ಷ ಸಭೆಯಲ್ಲಿ ಭಾಗವಹಿಸಿದ್ದ ಕೇಂದ್ರ ಸಚಿವರು, ಸಂಸದರು ಹಾಗೂ ಪ್ರತಿಪಕ್ಷಗಳ ನಾಯಕರು ಸದನ ಕೈಗೊಂಡ ನಿರ್ಣಯಕ್ಕೆ ಬದ್ಧರಾಗಿರುವಂತೆ ಸಲಹೆ ನೀಡಿದ್ದಾರೆ ಎಂದರು.
ಕೇಂದ್ರ ಜಲ ಸಂಪನ್ಮೂಲ ಸಚಿವರ ನೇತೃತ್ವದಲ್ಲಿ ನಾಳೆ ಉಭಯ ರಾಜ್ಯಗಳ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ಭಾಗವಹಿಸಲು ನಾನು ದೆಹಲಿಗೆ ಹೋಗುತ್ತಿದ್ದೇನೆ. ಶಾಸಕಾಂಗದ ನಿರ್ಣಯ ಸೇರಿದಂತೆ ಇತರೆ ವಿಚಾರಗಳನ್ನು ಸಭೆಯಲ್ಲಿ ಚರ್ಚಿಸಲಾಗುವುದು ಮತ್ತು ಸಭೆಯ ನಂತರ ತಮಿಳುನಾಡಿಗೆ ನೀರು ಬಿಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.
ನಾವು ಆದೇಶ ಮಾರ್ಪಾಡು ಕೋರಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಹಾಕಿದ್ದೇವು, ತಮಿಳುನಾಡು ಕೂಡಾ ಒಂದು ಅರ್ಜಿ ಹಾಕಿತ್ತು. ನಮ್ಮ ಅರ್ಜಿ ಜೊತೆ ಸದನದಲ್ಲಿ ಕೈಗೊಂಡ ನಿರ್ಣಯವನ್ನು ಲಗತ್ತಿಸಿದ್ದೇವು. ಸುಪ್ರೀಂಕೋರ್ಟ್ ನೀಡಿರುವ ಆದೇಶದಲ್ಲಿ ಎರಡು ಅಂಶಗಳಿವೆ. ಒಂದು ಮೂರು ದಿನಗಳ ಕಾಲ ಮತ್ತೆ ಪ್ರತಿದಿನ 6 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಮತ್ತೊಂದು ಅಟಾರ್ನಿ ಜನರಲ್ ಗೆ ಕೇಂದ್ರ ಮಧ್ಯಸ್ಥಿಕೆ ವಹಿಸಲು ಸೂಚಿಸಿದೆ, ಹಾಗಾಗಿ ನಾಳಿನ ಸಭೆಯಲ್ಲಿ ಏನಾಗುತ್ತೆ ನೋಡೋಣ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.