ವಾಷಿಂಗ್ಟನ್: ಉರಿ ಉಗ್ರ ದಾಳಿ ಬಳಿಕ ಪಾಕಿಸ್ತಾನ ಹಾಗೂ ಭಾರತದ ನಡುವಿನ ಬಾಂಧವ್ಯ ಹಾಳಾಗಿರುವಂತೆಯೇ ಪಾಕ್ ಸರ್ಕಾರದ ನಡೆಯನ್ನು ಅಮೆರಿಕದ ಖ್ಯಾತ ಪತ್ರಿಕೆ ಟೀಕಿಸಿದ್ದು, ಭಾರತದ ಸಂಯಮವನ್ನು ಲಘುವಾಗಿ ಪರಿಗಣಿಸಿದರೆ ಪಾಕಿಸ್ತಾನ ಬಹಿಷ್ಕೃತ ರಾಷ್ಟ್ರವಾಗುವ ಅಪಾಯವಿದೆ ಎಂದು ಎಚ್ಚರಿಸಿದೆ.
ಅಮೆರಿಕದ ಖ್ಯಾತ ಪತ್ರಿಕೆ "ದಿ ವಾಲ್ ಸ್ಟ್ರೀಟ್ ಜನರಲ್" ಪಾಕಿಸ್ತಾನಕ್ಕೆ ಪರೋಕ್ಷ ಎಚ್ಚರಿಕೆ ನೀಡಿದ್ದು, "ಉರಿ ಉಗ್ರ ದಾಳಿ ಬಳಿಕ ಪಾಕಿಸ್ತಾನದ ವಿರುದ್ಧ ನರೇಂದ್ರ ಮೋದಿ ಅಸಮಾಧಾನಗೊಂಡಿರಬಹುದು. ಆದರೆ ಪಾಕಿಸ್ತಾನ ಪದೇ ಪದೇ ಭಾರತದ ಸಹಕಾರವನ್ನು ನಿರಾಕರಿಸುತ್ತಿದ್ದರೆ ಖಂಡಿತಾ ಮುಂದಿನ ದಿನಗಳಲ್ಲಿ ಬಹಿಷ್ಕೃತ ರಾಷ್ಟ್ರವಾಗುವ ಅಪಾಯವಿದೆ. ಉಗ್ರ ಕೃತ್ಯ ಹಾಗೂ ಪಾಕಿಸ್ತಾನದ ರಾಜಕೀಯ ಅಸ್ತಿರತೆಯಿಂದಾಗಿ ಈಗಾಗಲೇ ಪಾಕಿಸ್ತಾನವನ್ನು ಅಸ್ಪೃಶ್ಯ ರಾಷ್ಟ್ರವವೆಂಬಂತೆ ಕಾಣಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಪಾಕಿಸ್ತಾನದ ಪ್ರಸ್ತುತ ನಡೆಗಳು ಆ ದೇಶವನ್ನು ವಿಶ್ವ ಸಮುದಾಯದಲ್ಲಿ ಪ್ರತ್ಯೇಕವಾಗಿಸುವ ಭಾರತದ ಪ್ರಯತ್ನಕ್ಕೆ ಪುಷ್ಠಿ ನೀಡುವಂತಿದೆ".
ಪಾಕಿಸ್ತಾನಿ ಸೇನಾಪಡೆಗಳು ಇದೇ ರೀತಿ ಗಡಿಯಲ್ಲಿರುವ ಉಗ್ರರಿಗೆ ಶಸ್ತ್ರಾಸ್ತ್ರ ರವಾನೆ ಮಾಡುತ್ತಿದ್ದರೆ ಪ್ರಸ್ತುತ ಪಾಕಿಸ್ತಾನದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರು ಕೈಗೊಳ್ಳಲ್ಲಿಚ್ಚಿಸಿರುವ ಕಠಿಣ ಕ್ರಮಕ್ಕೆ ಬಲವಾದ ಸಮರ್ಥನೆ ಸಿಕ್ಕಂತಾಗುತ್ತದೆ. ಭಾರತದ ಈ ಹಿಂದಿನ ಕಾಂಗ್ರೆಸ್ ಹಾಗೂ ಬಿಜೆಪಿ ಸರ್ಕಾರಗಳು ಪ್ರಾಮಾಣಿಕತೆಯ ಕೊರತೆಯಿಂದಾಗಿ ಭಯೋತ್ಪಾದನೆ ವಿರುದ್ಧ ಸಮರ್ಥವಾಗಿ ಹೋರಾಡಲು ವಿಫಲವಾಗಿದ್ದವು ಎಂದು ಪತ್ರಿಕೆ ಹೇಳಿದೆ.
ಮೋದಿ ನಡೆಗೆ ಪತ್ರಿಕೆ ಶ್ಲಾಘನೆ
ಇನ್ನು ಇದೇ ವೇಳೆ ಉರಿಯಲ್ಲಿ ನಡೆದ ಭೀಕರ ಉಗ್ರ ದಾಳಿಯ ಹೊರತಾಗಿಯೂ ಪಾಕಿಸ್ತಾನದ ವಿರುದ್ಧ ಯಾವುದೇ ರೀತಿಯ ಸೈನಿಕ ಕಾರ್ಯಾಚರಣೆ ನಡೆಸದೇ, ಉಗ್ರರಿಗೆ ಆಶ್ರಯ ನೀಡುತ್ತಿರುವ ಪಾಕಿಸ್ತಾನವನ್ನು ವಿಶ್ವಸಮುದಾಯದಿಂದ ಪ್ರತ್ಯೇಕವಾಗಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಯತ್ನಗಳನ್ನು ವಾಲ್ ಸ್ಟ್ರೀಟ್ ಜರ್ನಲ್ ಪತ್ರಿಕೆ ಶ್ಲಾಘಿಸಿದೆ. "ಉರಿ ಉಗ್ರ ದಾಳಿಯನ್ನು ಗಂಭೀರವಾಗಿ ಪರಿಗಣಿಸಿರುವ ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನದ ವಿರುದ್ಧ ಯಾವುದೇ ಸೈನಿಕ ಕಾರ್ಯಾಚರಣೆಗೆ ಮುಂದಾಗಿಲ್ಲ. ಬದಲಿಗೆ ಪಾಕಿಸ್ತಾನವನ್ನು ವಿಶ್ವ ಸಮುದಾಯದಿಂದ ಪ್ರತ್ಯೇಕವಾಗಿಸಲು ಪ್ರಯತ್ನಿಸುತ್ತಿದ್ದಾರೆ. ಇದೇ ಕಾರಣಕ್ಕೆ 1960ರ ಪಾಕಿಸ್ತಾನದೊಂದಿಗಿನ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವನ್ನು ಪುನರ್ ಪರಿಶೀಲನೆ ನಡೆಸಲು ಮುಂದಾಗಿದ್ದಾರೆ. ಆ ಮೂಲಕ ಸಿಂಧೂ ನದಿ ಮೇಲಿನ ಪಾಕಿಸ್ತಾನದ ಹಕ್ಕನ್ನು ಪ್ರಶ್ನಿಸುವ ಕೆಲಸವನ್ನು ಭಾರತ ಮಾಡುತ್ತಿದೆ ಎಂದು ಪತ್ರಿಕೆ ಹೇಳಿದೆ.