ನವದೆಹಲಿ: ಮಧ್ಯ ಪ್ರದೇಶದಲ್ಲಿ ದೋಷ ಪೂರಿತ ಮತಯಂತ್ರಗಳ ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸತ್ ಕಲಾಪದಲ್ಲಿ ಪ್ರತಿಪಕ್ಷ ಸದಸ್ಯರು ಬುಧವಾರ ಭಾರಿ ಕೋಲಾಹಲ ಸೃಷ್ಟಿಸುತ್ತಿದೆ.
ಇಂದು ರಾಜ್ಯಸಭೆಯಲ್ಲಿ ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ಹಾಗೂ ಎಸ್ ಪಿ ಮುಖಂಡ ರಾಮ್ ಗೋಪಾಲ್ ಯಾದವ್ ಅವರು ವಿಷಯ ಪ್ರಸ್ತಾಪಿಸಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಸದನದ ಗಮನ ಸೆಳೆದರು. ಇದಕ್ಕೆ ಬೆಂಬಲ ನೀಡಿದ ಕಾಂಗ್ರೆಸ್ ಸದಸ್ಯರು ಚುನಾವಣಾ ಆಯೋಗ ಕೂಡಲೇ ವಿದ್ಯುನ್ಮಾನ ಮತಯಂತ್ರಗಳನ್ನು ನಿಷೇಧಿಸಿ ಅದರ ಬದಲಿಗೆ ಬ್ಯಾಲೆಟ್ ಪೇಪರ್ ಮೂಲಕ ಉಪ ಚುನಾವಣೆ ನಡೆಸಬೇಕು ಎಂದು ಆಗ್ರಹಿಸಿದರು. ಅಲ್ಲದೆ ದೋಷ ಪೂರಿತ ಇವಿಎಂ ಪ್ರಕರಣದಲ್ಲಿ ಬಿಜೆಪಿ ಕೈವಾಡವಿದೆ ಎಂದೂ ಗಂಭೀರ ಆರೋಪ ಮಾಡಿದರು.
ಇದನ್ನು ವಿರೋಧಿಸಿದ ಬಿಜೆಪಿ ಚುನಾವಣಾ ಸೋಲನ್ನು ಅರಗಿಸಿಕೊಳ್ಳಲಾಗದೇ ಸುಖಾಸುಮ್ಮನೆ ಬಿಜೆಪಿ ಪಕ್ಷದ ಮೇಲೆ ಆರೋಪ ಹೊರಿಸಲಾಗುತ್ತಿದೆ ಎಂದು ಕಿಡಿಕಾರಿತು. ಈ ವೇಳೆ ಮಾತನಾಡಿದ ಬಿಜೆಪಿ ಸದಸ್ಯ ಮುಕ್ತಾರ್ ಅಬ್ಬಾಸ್ ನಖ್ವಿ ಅವರು, ವಿಪಕ್ಷಗಳು ಚುನಾವಣಾ ಸೋಲನ್ನು ಒಪ್ಪಿಕೊಳ್ಳಬೇಕಿದ್ದು, ಪ್ರಜೆಗಳ ತೀರ್ಪನ್ನು ಗೌರವಿಸಬೇಕು ಎಂದು ಹೇಳಿದರು. ಮತಯಂತ್ರದಲ್ಲಿ ದೋಷವಿದ್ದರೆ ಚುನಾವಣಾ ಆಯೋಗವನ್ನು ಕೇಳಬೇಕೇ ಹೊರತು ಸಂಸತ್ ನ ಅಮೂಲ್ಯ ಸಮಯವನ್ನು ವ್ಯರ್ಥಮಾಡಬಾರದು ಎಂದು ಹೇಳಿದರು.