ನವದೆಹಲಿ: ಗ್ರೇಟರ್ ನೋಯ್ಡಾದಲ್ಲಿ ನಡೆದ ದಾಳಿ ಬಳಿಕ ಆಫ್ರಿಕನ್ನರು ಭಾರತೀಯರನ್ನು "ಜನಾಂಗೀಯ ದ್ವೇಷಿಗಳು" ಎಂದು ದೂಷಿಸುತ್ತಿದ್ದಾರೆ. ಇಂತಹ ಆರೋಪಗಳನ್ನು ಕೇಳಿ ನಿಜಕ್ಕೂ ನನಗೆ ಅಚ್ಚರಿಯಾಯಿತು ಎಂದು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.
ದೆಹಲಿಯ ಸಮೀಪ ಆಫ್ರಿಕನ್ ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆಗೆ ಸಂಬಂಧಿಸಿದಂತೆ ಇಂದು ಲೋಕಸಭೆಗೆ ಮಾಹಿತಿ ನೀಡಿದ ಸುಷ್ಮಾ ಸ್ವರಾಜ್ ಅವರು, ಇದೊಂದು ಅಪರಾಧ ಕೃತ್ಯವೇ ಹೊರತು ಜನಾಂಗೀಯ ದಾಳಿಯಲ್ಲ. ಪ್ರಕರಣವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಸ್ವತಃ ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಹೇಳಿದರು.
ಇದೇ ವೇಳೆ ಆಫ್ರಿಕನ್ ಪ್ರಜೆಗಳ ಆರೋಪಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸುಷ್ಮಾ ಸ್ವರಾಜ್ ಅವರು, ಯಾರೋ ಕಿಡಿಕೇಡಿಗಳು ಕೆಲ ಆಫ್ರಿಕನ್ನರ ಮೇಲೆ ದಾಳಿ ಮಾಡಿದಾಕ್ಷಣ ಎಲ್ಲ ಭಾರತೀಯರನ್ನೂ ಜನಾಂಗೀಯ ದ್ವೇಷಿಗಳೆಂದು ಕರೆಯುವುದು ಸರಿಯಲ್ಲ. ಆಫ್ರಿಕಾದಲ್ಲೂ ಕೂಡ ಭಾರತೀಯರ ಮೇಲೆ ಸಾಕಷ್ಟು ದಾಳಿಗಳಾಗಿವೆ, ಅಲ್ಲೂ ಕೂಡ ಭಾರತೀಯರು ಸತ್ತಿದ್ದಾರೆ. ಹಾಗೆಂದ ಮಾತ್ರಕ್ಕೆ ಆಫ್ರಿಕನ್ನರನ್ನೂ ಜನಾಂಗೀಯ ದ್ವೇಷಿಗಳೆನ್ನಲು ಸಾಧ್ಯವಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ವಿದ್ಯಾರ್ಥಿಗಳು ಮತ್ತು ಇತರೆ ಆಫ್ರಿಕನ್ ಪ್ರಜೆಗಳು ಮಾಡುತ್ತಿರುವ ಆರೋಪ ಸರಿಯಲ್ಲ ಎಂದು ಸುಷ್ಮಾ ಕಿಡಿಕಾರಿದರು.
ಶಂಕಿತ ಉದ್ದೀಪನ ಮದ್ದಿನಿಂದ ಬಾಲಕ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಫ್ರಿಕನ್ ವಿದ್ಯಾರ್ಥಿಗಳ ಮೇಲೆ 2 ಬಾರಿ ದಾಳಿಯಾಗಿತ್ತು. ಮಾಲ್ ನಲ್ಲಿ ನಡೆದ ದಾಳಿ ಮತ್ತು ಸಂತಾಪ ಸೂಚಕ ಕಾರ್ಯಕ್ರಮದಲ್ಲಿ ನಡೆದ ದಾಳಿಗಳಲ್ಲಿ ಆಫ್ರಿಕನ್ನರ ಮೇಲೆ ದಾಳಿಯಾಗಿತ್ತು. ಇದಾದ ಬಳಿಕ ಕೀನ್ಯಾದ ಮಹಿಳೆ ಮೇಲೆ ದಾಳಿಯಾಗಿತ್ತು. ದೂರು ನೀಡಿದ್ದ ಮಹಿಳೆ ಬಳಿಕ ತನ್ನ ದೂರನ್ನು ವಾಪಸ್ ಪಡೆದಿದ್ದಳು. ದೂರು ನೀಡಿದ್ದ ಸಂದರ್ಭದಲ್ಲಿ ಮಹಿಳೆ ಸುಳ್ಳು ಆರೋಪ ಮಾಡಿದ್ದು, ಸಾಬೀತಾಗಿತ್ತು. ಮಹಿಳೆಯ ವೀಸಾ ಅವಧಿ ಮುಗಿದಿದ್ದರೂ ಆಕೆ ದೇಶದಲ್ಲೇ ಇದ್ದಳು. ಇನ್ನು ದಾಳಿ ಸಂಬಂಧ ಈಗಾಗಲೇ 6 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಹೀಗಿದ್ದೂ ಭಾರತ ಸರ್ಕಾರ ಕ್ರಮ ಕೈಗೊಂಡಿಲ್ಲ ಎಂಬ ಅವರ ವಾದ ಸರಿಯಲ್ಲ ಎಂದು ಸುಷ್ಮಾ ಸ್ವರಾಜ್ ಅಸಮಾಧಾನ ವ್ಯಕ್ತಪಡಿಸಿದರು.
ಇನ್ನು ಆಫ್ರಿಕನ್ ಪ್ರಜೆಗಳು ಭಾರತದಲ್ಲಿನ ದಾಳಿ ಕುರಿತಂತೆ ವಿಶ್ವಸಂಸ್ಥೆಯ ಮಾನವಹಕ್ಕುಗಳ ಸಮಿತಿಗೆ ದೂರು ನೀಡಲು ಮುಂದಾಗಿದ್ದಾರೆ. ದೂರು ನೀಡಲು ಅವರು ಸ್ವತಂತ್ರರು. ನ್ಯಾಯಾಂಗ ವ್ಯವಸ್ಥೆ ಕೂಡ ಇದೆ ಎಂದು ಸುಷ್ಮಾ ಸ್ವರಾಜ್ ಹೇಳಿದರು.