ನವದೆಹಲಿ: ಭಾರತದ ಭದ್ರತಾ ಕಾಳಜಿಯನ್ನು ಬಾಂಗ್ಲಾದೇಶ ಪರಿಣಾಮಕಾರಿಯಾಗಿ ಬಗೆಹಿರಿಸಿದ್ದು, ಬಾಂಗ್ಲಾದೇಶ ಭಾರತದ ನಂಬಿಕಸ್ಥ ಮಿತ್ರರಾಷ್ಟ್ರವಾಗಿದೆ ಎಂದು ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಹೇಳಿದ್ದಾರೆ.
ದೆಹಲಿಯಲ್ಲಿ ನಡೆಯುತ್ತಿರುವ ಇಂಡಿಯಾ ಅವೇರ್ನೆಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಅವರು, ಭಾರತ ಮತ್ತು ಬಾಂಗ್ಲಾದೇಶಗಳ ನಡುವೆ ವಿವಿಧ ಪ್ರಮುಖ ದ್ವಿಪಕ್ಷೀಯ ಒಪ್ಪಂದಗಳು ಏರ್ಪಟ್ಟಿದ್ದು, ಉಭಯ ದೇಶಗಳ ಸೌಹಾರ್ಧ ಸಂಬಂಧ ಇನ್ನು ಮುಂದೆ ಹೊಸ ಮಜಲಿನಲ್ಲಿ ಸಾಗಲಿದೆ. ಭಾರತದ ಭದ್ರತಾ ಕಾಳಜಿಯನ್ನು ಬಾಂಗ್ಲಾದೇಶ ಪರಿಣಾಮಕಾರಿಯಾಗಿ ಬಗೆಹರಿಸಿದ್ದು, ದೇಶದ ಮತ್ತು ದೇಶದ ಹೊರಗಿನ ಭದ್ರತಾ ಬೆದರಿಕೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
ಅಂತೆಯೇ ದಶಗಳಿಂದ ಇದ್ದ ಭೂ ಮತ್ತು ಸಮುದ್ರ ಗಡಿ ವಿವಾದವನ್ನು ಬಗೆಹರಿಸಿಕೊಳ್ಳಲಾಗಿದ್ದು, ಇದಕ್ಕೆ ನೆರವಾದ ಭಾರತದ ಎಲ್ಲ ರಾಜಕೀಯ ನಾಯಕಿಯರಿಗೆ ಮತ್ತು ಸಂಸತ್ ಸದಸ್ಯರಿಗೆ ಧನ್ಯವಾದ ತಿಳಿಸಲು ಇಚ್ಛಿಸುತ್ತೇನೆ. ಅಂತೆಯೇ 1971ರಲ್ಲಿ ನಡೆದಿದ್ದ ಬಾಂಗ್ಲಾ ವಿಮೋಚನೆ ಸಂದರ್ಭದಲ್ಲಿ ಪಾಕಿಸ್ತಾನ ಸೇನೆ ನಡೆಸಿದ್ದ ಜನಾಂಗೀಯ ದಾಳಿಯ ವಿರುದ್ಧ ಬಾಂಗ್ಲಾದೇಶ ಸಂಸತ್ತು ಕಳೆದ ಮಾರ್ಚ್ ನಲ್ಲಿ ನಿರ್ಣಯ ಕೈಗೊಂಡಿತ್ತು. ಅಂತೆಯೇ ಮಾರ್ಚ್ 25ನ್ನು ಜನಾಂಗೀಯ ದ್ವೇಷದ ವಿರೋಧಿ ದಿನವಾಗಿ ಆಚರಿಸಲು ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಬಾಂಗ್ಲಾದೇಶ ಮತ್ತು ಭಾರತ ನಡುವಿನ ಸಂಬಂಧ ಸುಧಾರಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಬದ್ಧರಾಗಿದ್ದು, ಎಲ್ಲ ಕ್ಷೇತ್ರಗಳಲ್ಲಿಯೂ ಸೌಹಾರ್ಧ ಸಂಬಂಧ ಬಯಸಿದ್ದಾರೆ. ಬಾಂಗ್ಲಾದೇಶ ಕೂಡ ಭಾರತದೊಂದಿಗಿನ ಸೌಹಾರ್ಧ ಸಂಬಂಧ ಉತ್ತಮಗೊಳಿಸಲು ಬಯಸಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಉಭಯ ದೇಶಗಳ ನಡುವಿನ ಸಂಬಂಧ ಹೊಸ ಮಜಲಿನಲ್ಲಿ ಸಾಗಲಿದೆ ಎಂದು ಶೇಖ್ ಹಸೀನಾ ತಿಳಿಸಿದರು.
ಶೇಖ್ ಹಸೀನಾ ಅವರ ಈ ಭಾರತ ಭೇಟಿ ವೇಳೆ ಉಭಯ ದೇಶದ ನಾಯಕರು ಸುಮಾರು 6.5 ಬಿಲಿಯನ್ ವಾಣಿಜ್ಯ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.