ಪ್ರಧಾನ ಸುದ್ದಿ

ಯಮುನಾ ನದಿ ಪರಿಸರ ಹಾಳು; ತಜ್ಞರ ವರದಿ ಸೋರಿಕೆಯಾಗಿದೆ: ಆರ್ಟ್ ಆಫ್ ಲಿವಿಂಗ್

Lingaraj Badiger
ನವದೆಹಲಿ: ಯಮುನಾ ನದಿ ತೀರದ ಪರಿಸರ ಹಾನಿ ಬಗ್ಗೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ(ಎನ್‌ಜಿಟಿ)ತಜ್ಞರ ಸಮಿತಿ ನೀಡಿರುವ ವರದಿಯ ಪ್ರತಿ ನಮಗೆ ತಲುಪಿಸುವ ಮೊದಲೇ ಮಾಧ್ಯಮಗಳಿಗೆ ಸೋರಿಕೆಯಾಗಿದೆ ಎಂದು  ಆರ್ಟ್ ಆಫ್ ಲಿವಿಂಗ್‌ ಸಂಸ್ಥೆ ಗುರುವಾರ ಆರೋಪಿಸಿದೆ.
ಕಳೆದ ವರ್ಷ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ ಆರ್ಟ್ ಆಫ್ ಲಿವಿಂಗ್‌ ಸಂಸ್ಥೆ ಯಮುನಾ ನದಿ ತೀರದಲ್ಲಿ ಆಯೋಜಿಸಿದ್ದ ವಿಶ್ವ ಸಂಸ್ಕೃತಿ ಉತ್ಸವದಿಂದಾಗಿ ಆ ಪ್ರದೇಶದ ಪರಿಸರಕ್ಕೆ ಗಂಭೀರ ಹಾನಿಯಾಗಿದ್ದು, ಅದನ್ನು ಸರಿಪಡಿಸಲು 13.29 ಕೋಟಿ ರುಪಾಯಿ ಖರ್ಚಾಗಲಿದೆ ಮತ್ತು ಅದಕ್ಕೆ 10 ವರ್ಷ ಸಮಯ ಬೇಕು ಎಂದು ತಜ್ಞರ ಸಮಿತಿ ತನ್ನ ವರದಿಯಲ್ಲಿ ತಿಳಿಸಿದೆ. 
ಈ ಬಗ್ಗೆ ಇಂದು ಪ್ರತಿಕ್ರಿಯಿಸಿರುವ ಆರ್ಟ್ ಆಫ್ ಲಿವಿಂಗ್ ಸಂಸ್ಥೆ, ವರದಿಯ ಪ್ರತಿಯನ್ನು ನಮಗೆ ನೀಡುವ ಮೊದಲೇ ಮಾಧ್ಯಮಗಳಿಗೆ ಸೋರಿಯಾಗಿದೆ. ಇದರಿಂದ ಆರಂಭದಿಂದಲೂ ನಮ್ಮ ಸಂಸ್ಥೆಯ ಗೌರವಕ್ಕೆ ಧಕ್ಕೆ ತರುವ ದುರುದ್ದೇಶ ಸ್ಪಷ್ಟವಾಗಿ ತಿಳಿಯುತ್ತದೆ ಎಂದು ಆರ್ಟ್ ಆಫ್ ಲಿವಿಂಗ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಆರ್ಟ್ ಆಫ್ ಲಿವಿಂಗ್ ಒಂದು ಜವಾಬ್ದಾರಿಯುತ ಮತ್ತು ಪರಿಸರ ಸೂಕ್ಷ್ಮ ಎನ್ ಜಿಒ ಆಗಿದ್ದು, ನಾವು ಪರಿಸರಕ್ಕೆ ಯಾವುದೇ ರೀತಿಯ ಹಾನಿ ಮಾಡಿಲ್ಲ. ನಮ್ಮ ವಿರುದ್ಧದ ಆರೋಪದ ಹಿಂದೆ ಪಿತೂರಿ ಇದೆ. ತಜ್ಞರ ಸಮಿತಿ ನೀಡಿರುವ ವರದಿ ಕುರಿತು ತಮ್ಮ ಕಾನೂನು ತಂಡ ಅಧ್ಯಯನ ನಡೆಸಿ ಮುಂದಿನ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದೆ.
ಕೇಂದ್ರ ಜಲಸಂಪನ್ಮೂಲ ಸಚಿವಾಲಯದ ಕಾರ್ಯದರ್ಶಿ ಶಶಿ ಶೇಖರ್ ನೇತೃತ್ವದ ತಜ್ಞರ ಸಮಿತಿ ಹಸಿರು ನ್ಯಾಯ ಮಂಡಳಿಗೆ ನಿನ್ನೆ ವರದಿ ನೀಡಿದ್ದು, ಯಮುನಾ ನದಿ ತೀರದ ಪರಿಸರಕ್ಕಾದ ಹಾನಿ ಸರಿಪಡಿಸುವ ಪ್ರಕ್ರಿಯೆಗೆ ಸುಮಾರು 10 ವರ್ಷ ಬೇಕಾಗಬಹುದು ಎಂದೂ ಹೇಳಿದೆ.
ಆರ್ಟ್ ಆಫ್ ಲಿವಿಂಗ್ ಕಾರ್ಯಕ್ರಮದಿಂದಾಗಿ ಯಮುನಾ ನದಿಯ ಪಶ್ಚಿಮದ 120 ಹೆಕ್ಟೇರ್ ತೀರ ಪ್ರದೇಶ ಮತ್ತು ಪೂರ್ವದ 50 ಹೆಕ್ಟೇರ್ ತೀರ ಪ್ರದೇಶಕ್ಕೆ ಗಂಭೀರ ಹಾನಿಯಾಗಿದೆ ಎಂದು ಸಮಿತಿ ವರದಿ ನೀಡಿದೆ.
SCROLL FOR NEXT