ಚೆನ್ನೈ: ತಮಿಳುನಾಡು ಆಡಳಿತರೂಢ ಎಐಎಡಿಎಂಕೆಯ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿದ್ದು, ಇತ್ತೀಚಿಗಷ್ಟೆ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದ ವಿ.ಕೆ.ಶಶಿಕಲಾ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ಎಐಎಡಿಎಂಕೆ ಕಾರ್ಯಕಾರಿ ಅಧ್ಯಕ್ಷ ಇ ಮಧುಸೂದನನ್ ಅವರು ಹೇಳಿದ್ದಾರೆ.
ಇದಕ್ಕು ಮುನ್ನ ಶಶಿಕಲಾ ಅವರು ಮಧುಸೂದನನ್ ಅವರನ್ನು ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಅಧ್ಯಕ್ಷ ಸ್ಥಾನದಿಂದ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಮಧುಸೂದನನ್ ಅವರು, ಅವರು ನನ್ನನ್ನು ಉಚ್ಚಾಟಿಸುವ ಮೊದಲೇ ನಾನು ಅವರನ್ನು ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಹಾಗೂ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಿದ್ದೇನೆ ಎಂದಿದ್ದಾರೆ.
ಶಶಿಕಲಾ ಅವರಿಗೆ ಯಾವುದೇ ಅಧಿಕಾರ ಇಲ್ಲ. ಅವರು ಕಾನೂನು ಬಾಹಿರವಾಗಿ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಿಯಮಬದ್ದ ಚುನಾವಣೆ ನಡೆಯಬೇಕು. ಆದರೆ ಅದು ನಡೆದಿಲ್ಲ. ಹೀಗಾಗಿ ಅವರ ಅವರ ಆಯ್ಕೆ ಅನೂರ್ಜಿತವಾಗಿದೆ ಎಂದು ಮಧುಸೂದನನ್ ಹೇಳಿದ್ದಾರೆ.
ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ಅವರು ಮಧುಸೂದನನ್ ಅವರನ್ನು ಅಧ್ಯಕ್ಷ ಸ್ಥಾನದಿಂದ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಟಾಟಿಸಿ ಆದೇಶ ಹೊರಡಿಸಿದ್ದಾರೆ. ಅಲ್ಲದೆ ನೂತನ ಕಾರ್ಯಕಾರಿ ಅಧ್ಯಕ್ಷರನ್ನಾಗಿ ಮಾಜಿ ಸಚಿವ ಕೆ.ಎ.ಸೆಂಗೊಟ್ಟಯ್ಯನ್ ಅವರನ್ನು ನೇಮಕ ಮಾಡಿದ್ದಾರೆ.
ಮಧುಸೂದನನ್ ಅವರು ನಿನ್ನೆಯಷ್ಟೆ ಶಶಿಕಲಾ ನಾಯಕತ್ವದ ವಿರುದ್ಧ ತಿರುಗಿಬಿದ್ದಿರುವ ಹಂಗಾಮಿ ಮುಖ್ಯಮಂತ್ರಿ ಓ ಪನ್ನೀರ್ ಸೆಲ್ವಂ ಅವರಿಗೆ ಬೆಂಬಲ ಘೋಷಿಸಿದ್ದರು. ಅಲ್ಲದೆ ಶಶಿಕಲಾ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವುದನ್ನು ವಿರೋಧಿಸಿ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದರು.
ಇನ್ನು ಮಾಜಿ ಕೇಂದ್ರ ಸಚಿವ ಇ.ಪೊನ್ನುಸಾಮಿ ಅವರು ಶಶಿಕಲಾ ಅವರು ನೀಡಿದ ಆಹ್ವಾನವನ್ನು ತಿರಸ್ಕರಿಸಿದ್ದು, ತಾವು ಓ ಪನ್ನೀರ್ ಸೆಲ್ವಂ ಅವರಿಗೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ. ಇಂದು ಪನ್ನೀರ್ ಸೆಲ್ವಂ ಅವರನ್ನು ಭೇಟಿ ಮಾಡಿ ಬೆಂಬಲ ಘೋಷಿಸಿದ ಪೊನ್ನುಸಾಮಿ, ಪನ್ನೀರ್ ಸೆಲ್ವಂ ಅವರು ಒಬ್ಬ ಪ್ರಮಾಣಿಕ ನಾಯಕ. ಹೀಗಾಗಿ ಪಕ್ಷ ಉಳಿಸಲು ಎಲ್ಲರೂ ಓಪಿಎಸ್ ಗೆ ಬೆಂಬಲ ನೀಡಿ ಎಂದು ಮನವಿ ಮಾಡಿದ್ದಾರೆ.