ಬೆಂಗಳೂರು: ಜಯಲಲಿತಾ ಮತ್ತು ಶಶಿಕಲಾ ಅವರ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ತೀರ್ಪಿನಲ್ಲಿ ಲೋಪವಾಗಿದೆ ಎಂಬ ಅಂದಿನ ಸರ್ಕಾರಿ ಪರ ಅಭಿಯೋಜಕ ಬಿವಿ ಆಚಾರ್ಯ ಅವರು ಹೇಳಿದ್ದರಿಂದ ಕರ್ನಾಟಕ ಸರ್ಕಾರ ತಮಿಳುನಾಡಿನ ವಿರೋಧದ ನಡುವೆಯೂ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿತ್ತು.
ಅಂದಿನ ತಮಿಳುನಾಡು ಸಿಎಂ ಜೆ ಜಯಲಲಿತಾ ಮತ್ತು ಶಶಿಕಲಾ ಅವರ ವಿರುದ್ಧದ ಆಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ 2015ರ ಮೇ ತಿಂಗಳಲ್ಲಿ ಕರ್ನಾಟಕ ಹೈಕೋರ್ಟ್ ತನ್ನ ಅಂತಿಮ ತೀರ್ಪು ನೀಡಿತ್ತು. ವಿಶೇಷ ನ್ಯಾಯಾಲಯ ನೀಡಿದ್ದ ತೀರ್ಪನ್ನು ಅಮಾನತು ಮಾಡಿದ್ದ ಹೈಕೋರ್ಟ್ ಜಯಲಲಿತಾ ಮತ್ತು ಶಶಿಕಲಾ ಅವರನ್ನು ನಿರ್ದೋಷಿಗಳು ಎಂದು ತೀರ್ಪು ನೀಡಿತ್ತು. ಆದರೆ ಅಂದು ಹೈಕೋರ್ಟ್ ನ ತೀರ್ಪಿನ ಪ್ರತಿಯನ್ನು ಕೂಲಂಕುಷವಾಗಿ ಪರಿಶೀಲಿಸಿದ್ದ ಅಂದಿನ ಸರ್ಕಾರಿ ಪರ ಅಭಿಯೋಜಕ ಬಿವಿ ಆಚಾರ್ಯ ಅವರು ಹೈಕೋರ್ಟ್ ತೀರ್ಪಿನಲ್ಲಿ ಲೋಪವಾಗಿರುವ ಕುರಿತು ನ್ಯಾಯಾಧೀಶರ ಗಮನ ಸೆಳೆದಿದ್ದರು.
ಈ ಬಗ್ಗೆ ಮಾಧ್ಯಮಗಳಲ್ಲೂ ಹೇಳಿಕೆ ನೀಡಿದ್ದ ಬಿವಿ ಆಚಾರ್ಯ ಅವರು, "ಜಯಲಲಿತಾ ಅವರ ಸಾಲದ ಆದಾಯವನ್ನು ಕೂಡಿಕೆ ಮಾಡುವ ಪ್ರಕ್ರಿಯೆಯಲ್ಲಿ ಲೋಪ ಉಂಟಾಗಿದೆ. ಸಾಲದ ಮೂಲಕ ಆದಾಯವನ್ನು ನ್ಯಾಯಮೂರ್ತಿಗಳು 24 ಕೋಟಿ ಎಂದು ಪರಿಗಣಿಸಿದ್ದರು. ಆದರೆ ವಿವಿಧ ಬ್ಯಾಂಕುಗಳ ಸಾಲವನ್ನು ಕೂಡಿಕೆ ಮಾಡಿದಾಗ ಅಲ್ಲಿ ಬಂದಿದ್ದು ಕೇವಲ 10 ಕೋಟಿ ಮಾತ್ರ. ಉಳಿದ ಸುಮಾರು 13 ಕೋಟಿ 80 ಲಕ್ಷ ಹಣ ವ್ಯತ್ಯಾಸವಾಗುತ್ತಿದೆ. ಇದು ಆದಾಯ ಮೀರಿದ ಆಸ್ತಿಗಳಿಕೆ ಪ್ರಮಾಣವನ್ನು ಶೇ.76ಕ್ಕೆ ಏರಿಸುತ್ತಿದೆ" ಎಂದು ಹೇಳಿದ್ದರು.
ಸುಪ್ರೀಂ ಕೋರ್ಟ್ ನ ತೀರ್ಪಿನ ಅನ್ವಯ ಶೇ.70ಕ್ಕಿಂತ ಹೆಚ್ಚು ಆದಾಯ ಮೀರಿದ ಆಸ್ತಿ ಪತ್ತೆಯಾದರೆ ಅದು ಶಿಕ್ಷಾರ್ಹ ಪ್ರಕರಣವಾಗುತ್ತದೆ. ಇದೇ ಕಾರಣಕ್ಕಾಗಿ ಅಂದು ತೀರ್ಪು ನೀಡಿದ್ದ ಹೈಕೋರ್ಟ್ ನ್ಯಾಯಮೂರ್ತಿ ಸಿಆರ್ ಕುಮಾರಸ್ವಾಮಿ ಅವರು ಹೈಕೋರ್ಟ್ ಕಲಾಪಕ್ಕೆ ಬೇಸಿಗೆ ರಜೆ ಇದ್ದರೂ ಕೂಡ ಅಂದು ನ್ಯಾಯಾಲಯಕ್ಕೆ ಆಗಮಿಸಿ ತಮ್ಮ ಅಧಿಕಾರಿಗಳೊಂದಿಗೆ ಸೇರಿ ದಾಖಲೆಗಳ ಪರಿಶೀಲನೆ ನಡೆಸಿದರು.
ಆದರೆ ತೀರ್ಪಿನಲ್ಲಿ ಲೋಪ ಕಂಡುಬಂದರೂ ಕೂಡ ತೀರ್ಪು ಬದಲಾವಣೆ ಮಾಡುವ ಅಧಿಕಾರ ಹೈಕೋರ್ಟ್ ಗೆ ಇಲ್ಲ. ಸಿಆರ್ ಪಿಸಿ 362 ನಿಯಮದ ಪ್ರಕಾರ, ನ್ಯಾಯಾಲಯ ನೀಡಿದ ತೀರ್ಪಿನಲ್ಲಿ ಲೆಕ್ಕಾಚಾರದ, ದಾಖಲೆಗಳ ವ್ಯತ್ಯಾಸ ಕಂಡಬಂದರೆ ನ್ಯಾಯಾಲಯಕ್ಕೆ ತನ್ನ ತೀರ್ಪನ್ನು ಬದಲಿಸುವ ಅಧಿಕಾರ ಇಲ್ಲ. ಬದಲಿಗೆ ವ್ಯತ್ಯಾಸ ಕಂಡುಬಂದ ಲೆಕ್ಕಾಚಾರವನ್ನು ಅಥವಾ ದಾಖಲೆಗಳನ್ನು ಸರಿಪಡಿಸಬಹುದೇ ವಿನಾಃ ತೀರ್ಪಿನ ಆದೇಶವನ್ನು ಮರು ಪರಿಶೀಲನೆ ಮಾಡುವಂತಿಲ್ಲ. ತೀರ್ಪಿನ ಮರುಪರಿಶೀಲನೆಯನ್ನು ಉನ್ನತ ಮಟ್ಟದ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸುವ ಮೂಲಕ ಮರುಪರಿಶೀಲನೆ ನಡೆಸಬಹುದಾಗಿತ್ತು.
ಹೈಕೋರ್ಟ್ ತೀರ್ಪಿನಲ್ಲಿ ಲೋಪವಾಗಿದೆ ಎಂದಿದ್ದ ಎಸ್ ಪಿಪಿ ಬಿವಿ ಆಚಾರ್ಯ
ತಮಿಳುನಾಡು ವಿರೋಧದ ನಡುವೆಯೂ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಕರ್ನಾಟಕ ಸರ್ಕಾರ!
ಹೈಕೋರ್ಟ್ ನೀಡಿರುವ ತೀರ್ಪಿನಲ್ಲಿ ಲೋಪವಾಗಿದೆ ಎಂಬ ಸರ್ಕಾರಿ ಅಭಿಯೋಜಕರ ಹೇಳಿಕೆಯಿಂದಾಗಿ ಅಂದು ಸಿಎಂ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಕೆ ಮಾಡಲು ಮುಂದಾಗಿತ್ತು. ಆದರೆ ಅಂದು ಕರ್ನಾಟಕ ಸರ್ಕಾರದ ನಡೆಗೆ ತಮಿಳುನಾಡಿನಿಂದ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಕೆಲ ಎಐಎಡಿಎಂಕೆ ಶಾಸಕರು ನಿಮಗೂ ಪ್ರಕರಣಕ್ಕೂ ಏನು ಸಂಬಂಧ ನೀವೇಕೆ ಪ್ರಕರಣದಲ್ಲಿ ವಿನಾಕಾರಣ ಮೂಗು ತೂರಿಸುತ್ತಿದ್ದೀರಿ ಎಂದು ಕಿಡಿಕಾರಿದ್ದರು. ಇದರ ನಡುವೆಯೇ ಸಚಿವ ಸಂಪುಟ ಸಭೆ ಕರೆದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪುಟ ಸಭೆಯ ನಿರ್ಧಾರದಂತೆ ಜಯಲಲಿತಾ ಮತ್ತು ಶಶಿಕಲಾ ಅವರ ವಿರುದ್ಧ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದರು.
ಅದರಂತೆ 2015ರ ಜೂನ್ ನಲ್ಲಿ ಎಸ್‌ಪಿಪಿ ಬಿವಿ ಆಚಾರ್ಯ ಅವರು ಸಿದ್ಧಪಡಿಸಿದ್ದ 2700 ಪುಟಗಳ ಮೇಲ್ಮನವಿ ಅರ್ಜಿಯನ್ನು ಸಹಾಯಕ ಸಂದೇಶ್ ಚೌಟಾ ಅವರು ಸುರ್ಪೀಂಕೋರ್ಟ್‌ನಲ್ಲಿ ಸಲ್ಲಿಸಿದ್ದರು. ಇದೀಗ ಈ ಮೇಲ್ಮನವಿ ಅರ್ಜಿಯ ವಿಚಾರಣೆ ಪೂರ್ಣಗೊಂಡು ಸುಪ್ರೀಂ ಕೋರ್ಟ್ ತನ್ನ ಅಂತಿಮ ತೀರ್ಪು ನೀಡಿದೆ. ಪ್ರಕರಣದ ಮೊದಲ ಆರೋಪಿಯಾಗಿರುವ ಜಯಲಲಿತಾ ಅವರು ನಿಧನರಾದ ಹಿನ್ನಲೆಯಲ್ಲಿ ಅವರನ್ನು ಪ್ರಕರಣದಿಂದ ಕೈಬಿಟ್ಟು, 2, 3 ಮತ್ತು ನಾಲ್ಕನೇ ಆರೋಪಿಗಳಾದ ಶಶಿಕಲಾ, ನಟರಾಜನ್ ಮತ್ತು ಇಳವರಿಸಿ ಅವರಿಗೆ 4 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.