ಬೆಂಗಳೂರು: ಅಕ್ರಮ ಆಸ್ತಿ ಪ್ರಕರಣದಲ್ಲಿ ನಾಲ್ಕು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಹಾಗೂ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಆಪ್ತೆ ವಿ.ಕೆ. ಶಶಿಕಲಾ ಅವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಕರೆತರಲಾಗುತ್ತಿದೆ.
ಸುಪ್ರೀಂಕೋರ್ಟ್ ಆದೇಶದಂತೆ, ಇಂದು ಸಂಜೆಯೊಳಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಬಂದು ಶರಣಾಗಬೇಕಾದ್ದು, ಅವರೊಂದಿಗೆ, ಪ್ರಕರಣದ ಇತರ ಅಪರಾಧಿಗಳಾಗಿರುವ ಇಳವರಸಿ ಹಾಗೂ ಸುಧಾಕರನ್ ಅವರೂ ಸಹ ಜೈಲು ಸೇರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಕೇಂದ್ರೀಯ ಕಾರಾಗೃಹದ ಸುತ್ತ ಮುತ್ತ ಬಿಗಿಬಂದೋಬಸ್ತ್ ನೀಡಲಾಗಿದ್ದು, ಹೆಚ್ಚಿನ ಪೊಲೀಸ್ ಪಡೆಗಳನ್ನು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.
ಶಶಿಕಲಾ ಅವರು ಶರಣಾಗುವ ವೇಳೆ ಯಾವುದೇ ಅಹಿತಕರ ಘಟನೆಗಳು, ದೊಂಬಿ, ಗಲಾಟೆ ನಡೆಯದಿರಲೆಂದು ಕಾರಾಗೃಹದ ಸುತ್ತಲೂ ನಿರ್ದಿಷ್ಟ ದೂರದವರೆಗೆ 144ನೇ ಸೆಕ್ಷನ್ ಜಾರಿಗೊಳಿಸಲು ಪೊಲೀಸ್ ಇಲಾಖೆ ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ.