ಚೆನ್ನೈ: ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್ ಶಶಿಕಲಾ ಅವರನ್ನು ಅಪರಾಧಿ ಎಂದು ತೀರ್ಪು ನೀಡುತ್ತಿದ್ದಂತೆಯೇ ಶಶಿಕಲಾ ಕಣ್ಣೀರು ಹಾಕಿದ್ದಾರೆ ಎಂದು ತಿಳಿದುಬಂದಿದೆ.
ಕೂವತ್ತೂರಿನಲ್ಲಿರುವ ಗೋಲ್ಡನ್ ಬೇ ರೆಸಾರ್ಟ್ ನಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನ ಕುರಿತು ಸುದ್ದಿಗಳನ್ನು ಟಿವಿಯಲ್ಲಿ ನೋಡುತ್ತಿದ್ದ ಶಶಿಕಲಾ, ತೀರ್ಪು ಹೊರ ಬೀಳುತ್ತಿದ್ದಂತೆಯೇ ಕಣ್ಣೀರು ಹಾಕಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಶಶಿಕಲಾ ಆಪ್ತರು ಅವರನ್ನು ಸಂತೈಸಿದ್ದಾರೆ.
ಇನ್ನು ಇದೇ ವೇಳೆ ಶಶಿಕಲಾ ತಮ್ಮ ಉತ್ತರಾಧಿಕಾರಿ ನಾಯಕನಿಗಾಗಿ ಶಾಸಕರೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಗೋಲ್ಡನ್ ಬೇ ರೆಸಾರ್ಟ್ ನಲ್ಲಿರುವ ತಮ್ ಬೆಂಬಲಿಗ ಶಾಸಕರು ಮತ್ತು ಪಕ್ಷದ ಮುಖಂಡರೊಂದಿಗೆ ಶಶಿಕಲಾ ಚರ್ಚೆ ನಡೆಸುತ್ತಿದ್ದು, ತಮ್ಮ ಅನುಪಸ್ಥಿತಿಯಲ್ಲಿ ಪಕ್ಷವನ್ನು ಮುನ್ನಡೆಸುವ ಬದಲೀ ನಾಯಕನ ಆಯ್ಕೆ ಕುರಿತಂತೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಏತನ್ಮಧ್ಯೆ ಎಐಎಡಿಎಂಕೆ ಶಾಸಕರು ತಂಗಿರುವ ಗೋಲ್ಡನ್ ಬೇ ರೆಸಾರ್ಟ್ ಗೆ ವ್ಯಾಪಕ ಪೊಲೀಸ್ ಭದ್ರತೆ ನೀಡಸಲಾಗಿದ್ದು, ಹಿರಿಯ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿ ರಕ್ಷಣೆಯ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.