ಅಗರ್ತಲ: ಅಗರ್ತಲ ಪುಸ್ತಕೋತ್ಸವದಲ್ಲಿ ಪ್ರದರ್ಶನಗೊಂಡಿರುವ ಜಮ್ಮು ಮತ್ತು ಕಾಶ್ಮೀರದ ಪುಸ್ತಕವೊಂದನ್ನು ವಿರೋಧಿಸಿ ಹಿಂದುತ್ವ ಸಂಘಟನೆಯೊಂದು ಘೋಷಣೆ ಕೂಗಿ, ಪ್ರತಿಭಟಿಸಿರುವ ಹಿನ್ನಲೆಯಲ್ಲಿ, ಇಂತಹ ಯಾವುದೇ ಪ್ರತಿಭಟನೆಗಳನ್ನು ಸರ್ಕಾರ ಸಹಿಸಿಕೊಳ್ಳುವುದಿಲ್ಲ ಎಂದು ತ್ರಿಪುರ ಮಾಹಿತಿ ಮತ್ತು ಸಾಂಸ್ಕೃತಿಕ ವ್ಯವಹಾರಗಳ ಸಚಿವ ಭಾನುಲಾಲ್ ಸಾಹ ಬುಧವಾರ ಹೇಳಿದ್ದಾರೆ.
ಪುಸ್ತಕದಲ್ಲಿ ಭಾರತೀಯ ಸೇನೆಯನ್ನು ಕೆಟ್ಟದ್ದಾಗಿ ಚಿತ್ರಿಸಿದ್ದಾರೆ ಎಂದು ದೂರಿ ಮಂಗಳವಾರ ರಾತ್ರಿ ರಾಷ್ಟ್ರಧ್ವಜ ಹಿಡಿದ 'ತ್ರಿಪುರ ವಿವೇಕಾನಂದ ಜ್ಯೂಬಾ ಸೇನಾ'ದ ಸುಮಾರು ೨೦ ಕಾರ್ಯಕರ್ತರು ಪುಸ್ತಕೋತ್ಸವ ನಡೆಯುತ್ತಿರುವ ಮೈದಾನದ ಬಳಿ ನೆರೆದು ಘೋಷಣೆಗಳನ್ನು ಕೂಗಿದ್ದರು.
"ಪುಸ್ತಕೋತ್ಸವ ನಡೆಯುತ್ತಿರುವ ಆವರಣದ ಒಳಗೆ ಇಂತಹ ಪ್ರತಿಭಟನೆಗಳನ್ನು ನಾವು ಸಹಿಸಿಕೊಳ್ಳುವುದಿಲ್ಲ. ಕಳೆದ ೩೬ ವರ್ಷಗಳಿಂದ ಅಗರ್ತಲ ಪುಸ್ತಕೋತ್ಸವದಲ್ಲಿ ಇಂತಹ ಘಟನೆ ನಡೆದಿಲ್ಲ" ಎಂದು ಸಚಿವರು ಮಾಧ್ಯಮಗಳಿಗೆ ಹೇಳಿದ್ದಾರೆ.
ತ್ರಿಪುರಾದ ಜನತೆಗೆ ಇಂತಹ ಅಸಹಿಷ್ಣುತೆ ತಿಳಿದಿಲ್ಲ ಎಂದು ಕೂಡ ಸಚಿವರು ಹೇಳಿದ್ದಾರೆ.
೧೯೯೮ ರಲ್ಲಿ ಕೋಲ್ಕತ್ತಾ ಮೂಲದ ಪ್ರೊಗ್ರೆಸ್ಸಿವ್ ಪಬ್ಲಿಷರ್ಸ್ ಪ್ರಕಟಿಸಿದ್ದ 'ಕಾಶ್ಮೀರ' ಪುಸ್ತಕದ ಲೇಖಕ ಸಿದ್ಧಾರ್ಥ ಗುಹಾ ರಾಯ್. ಇದರಲ್ಲಿ ಜಮ್ಮು ಮತ್ತು ಕಾಶ್ಮೀರದ ಸ್ಥಿತಿ ಮತ್ತು ಭಾರತೀಯ ಸೇನೆಯ ಉಪಸ್ಥಿತಿ ಬಗ್ಗೆ ಲೇಖಕರು ಚರ್ಚಿಸಿದ್ದಾರೆ.
ಈ ಘಟನೆಯನ್ನು ಖಂಡಿಸಿರುವ ತ್ರಿಪುರ ಸಂಸ್ಕೃತಿ ಸಾಮಾನ್ಯ ಕೇಂದ್ರದ ಉಪಾಧ್ಯಕ್ಷ ಗೌತಮ್ ದಾಸ್, ೧೯೮೧ ರಿಂದ ಇಂತಹ ಮೂಲಭೂತವಾದಿತನವನ್ನು ತ್ರಿಪುರ ಜನ ಕಂಡಿಲ್ಲ ಎಂದಿದ್ದಾರೆ.
ತ್ರಿಪುರ ವಿವೇಕಾನಂದ ಜ್ಯೂಬಾ ಸೇನಾ ಭಾರತೀಯ ಜನತಾ ಪಕ್ಷಕ್ಕೆ ನಿಕಟವಾದ ಸಂಸ್ಥೆ ಎಂದು ಪ್ರಾದೇಶಿಕ ಪತ್ರಿಕೆಗಳು ವರದಿ ಮಾಡಿವೆ.
ಈ ಪುಸ್ತಕದ ಲೇಖಕ "ಭಾರತೀಯ ಸೇನೆ ಮತ್ತು ಭಾರತೀಯ ಸರ್ಕಾರದ ವಿರುದ್ಧ ಬರೆದಿದ್ದಾರೆ" ಎಂದಿರುವ ಸೇನಾ ವಕ್ತಾರ ಜಯದೀಪ್ ಚಕ್ರವರ್ತಿ, ಇದೆ ಕಾರಣಕ್ಕೆ ನಮ್ಮ ಸಂಸ್ಥೆ ಪ್ರತಿಭಟನೆ ನಡೆಸಿದ್ದಾಗಿ ತಿಳಿಸಿದ್ದಾರೆ.
ಈ ಬಲಪಂಥೀಯ ಸಂಘಟನೆಗೆ ನಮ್ಮ ಯಾವುದೇ ಸಂಬಂಧ ಇಲ್ಲ ಎಂದು ಬಿಜೆಪಿ ವಕ್ತಾರ ವಿಕ್ಟರ್ ಶೋಮ್ ಹೇಳಿದ್ದಾರೆ. "ತ್ರಿಪುರ ವಿವೇಕಾನಂದ ಜ್ಯೂಬಾ ಸೇನಾ ಪ್ರಾದೇಶಿಕ ಸಂಘಟನೆಯಾಗಿರಬಹುದು ಆದರೆ ಅದಕ್ಕೆ ಬಿಜೆಪಿ ಜೊತೆಗೆ ಸಂಬಂಧವಿಲ್ಲ. ಆದರೆ ಈ ಪುಸ್ತಕದಲ್ಲಿ ಭಾರತೀಯ ಸೇನೆಯನ್ನು ಉಗ್ರಗಾಮಿಗಳೆಂದಿರುವುದರಿಂದ ನಾವು ಪ್ರತಿಭಟನೆಯನ್ನು ಬೆಂಬಲಿಸುತ್ತೇವೆ" ಎಂದಿದ್ದಾರೆ.
೧೯೯೮ ರಲ್ಲಿ ಪ್ರಕಟವಾದಾಗಲಿಂದಲೂ ಯಾರು ಈ ಪುಸ್ತಕದ ವಿಷಯ-ವಸ್ತುವಿನ ಕುರಿತು ಆಕ್ಷೇಪ ಎತ್ತಿರಲಿಲ್ಲ ಎಂದು ಪ್ರಕಾಶಕರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics