ಪ್ರಧಾನ ಸುದ್ದಿ

ಶಬರಿಮಲೆಗೆ ಮಹಿಳೆಯರ ಪ್ರವೇಶ ನಿಷೇಧ: ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್

Lingaraj Badiger
ನವದೆಹಲಿ: ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯದ ಗರ್ಭಗುಡಿಗೆ ಮಹಿಳೆಯರ ಪ್ರವೇಶ ನಿಷೇಧಕ್ಕೆ ಸಂಬಂಧಿಸಿದ ಪ್ರಕರಣವನ್ನು ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಬೇಕೆ ಅಥವಾ ಬೇಡವೇ ಎಂಬ ಕುರಿತ ತೀರ್ಪನ್ನು ಸುಪ್ರೀಂ ಕೋರ್ಟ್ ಸೋಮವಾರ ಕಾಯ್ದಿರಿಸಿದೆ.
ನಿಷೇಧ ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ದೀಪಕ್ ಮಿಶ್ರ ನೇತೃತ್ವದ ತ್ರಿಸದಸ್ಯ ಪೀಠ, ಧಾರ್ಮಿಕ ಆಚರಣೆಯ ಸಂಪ್ರದಾಯದ ಬಗ್ಗೆ ಸಂವಿಧಾನದ ಅಡಿಯಲ್ಲೇ ನಿರ್ಧಾರ ಕೈಗೊಳ್ಳಬೇಕಾಗಿದೆ. ಕಾನೂನು, ಧರ್ಮ ಹಾಗೂ ಧಾರ್ಮಿಕತೆ ವಿವಿಧ ಆಯಾಮಗಳಾಗಿವೆ. ದೇವರು, ಸಂಪ್ರದಾಯ ನಂಬಿಕೆಯ ವಿಷಯವಾಗಿದೆ. ಆದರೆ ಸಾಂವಿಧಾನಿಕ ಪ್ರಶ್ನೆಗಳನ್ನು ನಾವು ನಿರ್ಧರಿಸಬೇಕಾಗಿದೆ ಎಂದು ಅಭಿಪ್ರಾಯವ್ಯಕ್ತಪಡಿಸಿದೆ.
ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ನಿಷೇಧ ಅಸಂವಿಧಾನಿಕ. ಮಹಿಳೆಯರ ಪ್ರವೇಶವನ್ನು ಯಾರೂ ತಡೆಯಬಾರದು ಎಂದು ಹಿಂದಿನ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ತಿಳಿಸಿತ್ತು. ಆದರೆ ಈ ಬಗ್ಗೆ ಯಾವುದೇ ಅಂತಿಮ ತೀರ್ಪನ್ನು ಪ್ರಕಟಿಸಿರಲಿಲ್ಲ.
10 ವರ್ಷದಿಂದ 50 ವರ್ಷದ ಮಹಿಳೆಯರಿಗೆ ದೇವಸ್ಥಾನ ಪ್ರವೇಶಕ್ಕೆ ವಿಧಿಸಿದ್ದ ನಿಷೇಧ ತೆರವುಗೊಳಿಸಲು ಈ ಹಿಂದಿನ ಉಮನ್ ಚಾಂಡಿ ನೇತೃತ್ವದ ಕಾಂಗ್ರೆಸ್ ಸರ್ಕಾರ ವಿರೋಧ ವ್ಯಕ್ತಪಡಿಸಿತ್ತು. ಆದರೆ ಸದ್ಯ ಅಧಿಕಾರದಲ್ಲಿರುವ ಎಲ್ ಡಿಎಫ್ ಸರ್ಕಾರ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಲು ಸಿದ್ಧ ಎಂದು ಪ್ರಮಾಣ ಪತ್ರ ಸಲ್ಲಿಸಿದೆ.
SCROLL FOR NEXT