ಪ್ರಧಾನ ಸುದ್ದಿ

ದೇಶಾದ್ಯಂತ ಮಹಾಶಿವರಾತ್ರಿ ಆಚರಣೆ, ಶಿವನ ದೇಗುಲಗಳ ಮುಂದೆ ಭಾರಿ ಜನಸ್ತೋಮ

Srinivasamurthy VN

ನವದೆಹಲಿ: ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ದೇಶಾದ್ಯಂತ ಭಕ್ತರು ಶಿವನ ಆರಾಧನೆಯಲ್ಲಿ ತೊಡಗಿದ್ದು, ವಿವಿಧ ಶಿವನ ದೇವಾಲಯದ ಎದುರು ಸರತಿ ಸಾಲಲ್ಲಿ ನಿಂತು ಪರಮೇಶ್ವರನ ದರ್ಶನ ಪಡೆಯುತ್ತಿದ್ದಾರೆ.

ದೇಶದ ಪ್ರಮುಖ ಈಶ್ವರನ ದೇವಾಲಯಗಳಾದ ಗುಜರಾತ್ ನ ಸೋಮನಾಥ್ ದೇಗುಲ, ಆಂಧ್ರಪ್ರದೇಶದ ಶ್ರೀಶೈಲಂನ ಮಲ್ಲಿಕಾರ್ಜುನ ಸ್ವಾಮಿ ದೇಗುಲ, ಉಜ್ಜೈನಿಯ ಮಹಾಕಾಳೇಶ್ವರ ದೇಗುಲ, ಇಂದೋರ್ ನ ಓಂಕಾರೇಶ್ವರ  ದೇಗುಲ, ಉತ್ತರಾಖಂಡದ ಕೇದರಾನಾಥ ದೇಗುಲ, ನಾಸಿಕ್ ನಲ್ಲಿರುವ ತ್ರಯಂಬಕೇಶ್ವರ ದೇಗುಲ, ತಮಿಳುನಾಡಿನ ರಾಮೇಶ್ವರಂ ನಲ್ಲಿರುವ ರಾಮನಾಥ ಸ್ವಾಮಿ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ.

ಅಂತೆಯೇ ಕರ್ನಾಟಕದ ಪ್ರಮುಖ ಈಶ್ವರನ ದೇಗುಲಗಳಾದ ಮುರುಡೇಶ್ವರ ದೇಗುಲ, ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನ, ಧರ್ಮಸ್ಥಳ ಶ್ರೀ ಮಂಜುನಾಥ ದೇವಾಲಯ, ಕದ್ರಿ ಮಂಜುನಾಥ ದೇವಾಲಯ, ಮಲೈ  ಮಹದೇಶ್ವ ದೇವಾಲಯ, ಗೋಕರ್ಣ ಮಹಾಬಲೇಶ್ವರ ದೇಗುಲ ಮತ್ತು ಕುದ್ರೋಳಿ ಗೋಕರ್ಣನಾಥೇಶ್ವರ ದೇಗುಲ ಸೇರಿದಂತೆ ವಿವಿಧ ದೇಗುಲಗಳ ಮುಂದೆ ಸಾವಿರಾರು ಭಕ್ತರು ನೆರೆದಿದ್ದು, ಪರಮೇಶ್ವರನ ದರ್ಶನಕ್ಕಾಗಿ ಸರತಿ  ಸಾಲಲ್ಲಿ ನಿಂತಿದ್ದಾರೆ.

ಮಹಾಶಿವರಾತ್ರಿ ಪ್ರಯುಕ್ತ ಹಲವು ದೇಗುಳಲ್ಲಿ ಇಂದು ಮುಂಜಾನೆಯಿಂದ ಹಲವು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ರಾತ್ರಿ ಪೂರ್ತಿ ಜಾಗರಣೆ ಮತ್ತು ಹಲವು ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.  ಇನ್ನು ಬೆಂಗಳೂರಿನ ವಿಮಾನ ನಿಲ್ದಾಣದ ರಸ್ತೆಯಲ್ಲಿರುವ ಬೃಹತ್ ಶಿವನ ಮೂರ್ತಿಯ ದೇವಾಲಯದಲ್ಲಿ ಇಂದು ವಿಶೇಷ ಪೂಜೆ ಮತ್ತು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಸಿರ್ಸಿ ವೃತ್ತದ ಬಳಿ ಇರುವ ಮಹದೇಶ್ವರ ಸ್ವಾಮಿ  ದೇಗುಲದಲ್ಲಿ ವಿಶೇಷ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ.

SCROLL FOR NEXT