ಮುಂಬೈ: ಬೃಹಾನ್ ಮುಂಬೈ ನಗರಸಭಾ (ಬಿಎಂಸಿ) ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಬರದ ಹಿನ್ನಲೆಯಲ್ಲಿ, ಮೇಯರ್ ಸ್ಥಾನಕ್ಕೆ ಶಿವಸೇನೆಗೆ ಬೆಂಬಲ ಸೂಚಿಸುವ ವಿಷಯದಲ್ಲಿ ಕಾಂಗ್ರೆಸ್ ಪಕ್ಷ ಒಡೆದ ಮನೆಯಾಗಿದೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಹಿರಿಯ ಕಾಂಗ್ರೆಸ್ ಮುಖಂಡ ಗುರುದಾಸ್ ಕಾಮತ್ ಶಿವಸೇನೆಗೆ ಯಾವುದೇ ರೀತಿಯ ಬೆಂಬಲ ನೀಡುವುದನ್ನು ಉಗ್ರವಾಗಿ ವಿರೋಧಿಸಿದ್ದಾರೆ.
"ಈ ಎರಡು ಕೇಸರಿ ಪಕ್ಷಗಳ ಒಡೆಯುವ ನೀತಿಯ ವಿರುದ್ಧ ಉದ್ದಕ್ಕೂ ಹೋರಾಡುತ್ತಾ ಬಂದಿದ್ದೇವೆ ಮತ್ತು ಈಗ ಅವರ ಜೊತಿಗಿನ ಹೊಂದಾಣಿಕೆಯನ್ನು ಜನ ಎಂದಿಗೂ ಕ್ಷಮಿಸಲಾರರು" ಎಂದು ಕಾಮತ್ ಹೇಳಿಕೆ ನೀಡಿದ್ದಾರೆ.
"ನನ್ನ ಅಭಿಪ್ರಾಯವನ್ನು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರಿಗೂ ತಿಳಿಸಿದ್ದೇನೆ. ಬಿಎಂಸಿಯಲ್ಲಿ ಶಿವಸೇನೆಗೆ ನೇರವಾಗಿ ಅಥವಾ ಪರೋಕ್ಷವಾಗಿ ಬೆಂಬಲಿಸುವ ಯಾವುದೇ ಚರ್ಚೆಯನ್ನು ನಾನು ವಿರೋಧಿಸುತ್ತೇನೆ" ಎಂದು ಮಾಜಿ ಕೇಂದ್ರ ಸಚಿವ ಹೇಳಿದ್ದಾರೆ.
ಶಿವಸೇನೆ ಮತ್ತು ಭಾರತೀಯ ಜನತಾ ಪಕ್ಷ ತಮ್ಮ ವಿವಾದಗಳನ್ನು ಬಗೆಹರಿಸಿಕೊಂಡು, ಅಧಿಕಾರದ ಆಸೆಯಲ್ಲಿ ಎರಡು ಪಕ್ಷಗಳು ಬಯಲಾಗುವುದಕ್ಕೆ ಬಿಡಬೇಕು ಎಂದು ಕೂಡ ಅವರು ಹೇಳಿದ್ದಾರೆ.
ಬಿಎಂಸಿಯಲ್ಲಿ ಶಿವಸೇನೆ ಬಿಜೆಪಿ ಮೈತ್ರಿ ಚರ್ಚೆ ಮುರಿದುಬಿದ್ದರೆ, ಶಿವಸೇನೆ ಮೇಯರ್ ಅಭ್ಯರ್ಥಿಗೆ ಬೆಂಬಲಿಸುವ ಮಾತುಕತೆ ಮಹಾರಾಷ್ಟ್ರ ಕಾಂಗ್ರೆಸ್ ನಲ್ಲಿ ಜಾರಿಯಲ್ಲಿದೆ ಎಂಬ ಸುದ್ದಿಯ ಹಿನ್ನಲೆಯಲ್ಲಿ ಕಾಮತ್ ಈ ಬಾಂಬ್ ಸಿಡಿಸಿದ್ದಾರೆ.