ನವದೆಹಲಿ: ಹೊಸ ವರ್ಷಾಚರಣೆ ವೇಳೆ ಬೆಂಗಳೂರಿನಲ್ಲಿ ನಡೆದ ಯುವತಿಯರ ಮೇಲಿನ ಸಾಮೂಹಿಕ ಲೈಂಗಿಕ ಕಿರುಕುಳ ಪ್ರಕರಣ ಇದೀಗ ದೇಶವ್ಯಾಪಿ ಸದ್ದು ಮಾಡುತ್ತಿದ್ದು, ಘಟನೆಯನ್ನು ಕೇಂದ್ರ ಸರ್ಕಾರ ಕಟು ಶಬ್ದಗಳಿಂದ ಖಂಡಿಸಿದೆ. ಅಲ್ಲದೆ ಪ್ರಕರಣ ಸಂಬಂಧ ರಾಜ್ಯ ಗೃಹ ಸಚಿವ ಜಿ ಪರಮೇಶ್ವರ ಅವರು ನೀಡಿದ್ದ ಹೇಳಿಕೆಯನ್ನು ನಾಚಿಕೆಗೇಡು ಎಂದು ಟೀಕಿಸಿದೆ.
ಇತ್ತೀಚೆಗೆ ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿದ್ದ ಪರಮೇಶ್ವರ ಅವರು, ಹೊಸ ವರ್ಷಾಚರಣೆ ವೇಳೆ ಭಾರಿ ಪ್ರಮಾಣದಲ್ಲಿ ಯುವಕ-ಯುವತಿಯರು ಸೇರುತ್ತಾರೆ. ಈ ಸಂದರ್ಭದಲ್ಲಿ ಕಿರುಕುಳದಂತಹ ಘಟನೆಗಳು ನಡೆಯುವುದು ಸಾಮಾನ್ಯ. ಆದರೆ ಘಟನೆ ಸಂಬಂಧ ನಾವು ಕಠಿಣ ಕ್ರಮ ಕೈಗೊಳ್ಳುತ್ತೇವೆ. ಹೊಸವರ್ಷಾಚರಣೆ ವೇಳೆ ಸಾಕಷ್ಟು ಮುಂಜಾಗ್ರತಾ ಕ್ರಮೈಗೊಳ್ಳಲಾಗಿತ್ತು. ಹೀಗಿದ್ದೂ ದುರ್ಘಟನೆ ಸಂಭವಿಸಿದೆ. ಇದೊಂದೇ ಕಾರಣಕ್ಕಾಗಿ ಬೆಂಗಳೂರನ್ನು ದೂಷಿಸುವುದು ಸರಿಯಲ್ಲ ಎಂದು ಹೇಳಿದ್ದರು.
ಗೃಹ ಸಚಿವರ ಈ ಹೇಳಿಕೆ ಇದೀಗ ವಿವಾದದ ಸ್ವರೂಪ ಪಡೆದಿದ್ದು, ಮಹಿಳಾ ಪರ ಸಂಘಟನೆಗಳು ಪರಮೇಶ್ವರ ಅವರ ಹೇಳಿಕೆಯನ್ನು ಖಂಡಿಸಿವೆ. ಗೃಹ ಸಚಿವರು ಘಟನೆಯನ್ನು ತೀರಾ ನಿರ್ಲಕ್ಷ್ಯದಿಂದ ನೋಡುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಇದೇ ವೇಳೆ ಪರಮೇಶ್ವರ ಅವರ ಹೇಳಿಕೆಯನ್ನು ಖಂಡಿಸಿರುವ ಕೇಂದ್ರ ಗೃಹಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ಅವರು, ಕರ್ನಾಟಕ ಗೃಹ ಸಚಿವರ ಹೇಳಿಕೆ ನಿಜಕ್ಕೂ ನಾಚಿಕೆಗೇಡು. ಮಹಿಳೆಯರ ಮೇಲಿನ ದೌರ್ಜನ್ಯ ಕರ್ನಾಟಕದಲ್ಲಿನ ಕಾನೂನು ಮತ್ತು ಸುವ್ಯವಸ್ಥೆಯನ್ನೇ ಪ್ರಶ್ನಿಸುವಂತಿದೆ. ಬೆಂಗಳೂರು ನಗರ ಪೊಲೀಸರು ಕೂಡಲೇ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.