ಕೇಂದ್ರ ಹಣಕಾಸು ಮಂತ್ರಿ ಅರುಣ್ ಜೇಟ್ಲಿ
ನವದೆಹಲಿ: ಐದು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣಾ ಮುಗಿಯುವವರೆಗೂ ಕೇಂದ್ರ ಹಣಕಾಸು ಬಜೆಟ್ ಮಂಡನೆ ಮುಂದೂಡುವುದಕ್ಕೆ ಕೆಲವು ರಾಜಕೀಯ ಪಕ್ಷಗಳು ಆಗ್ರಹಿಸಿರುವುದಕ್ಕೆ ಬುಧವಾರ ಪ್ರತಿಕ್ರಿಯಿಸಿರುವ ಕೇಂದ್ರ ಹಣಕಾಸು ಮಂತ್ರಿ ಅರುಣ್ ಜೇಟ್ಲಿ ಬಜೆಟ್ ಮಂಡಿಸುವುದು ಸಾಂವಿಧಾನಿಕ ಅಗತ್ಯತೆ ಎಂದಿದ್ದಾರೆ.
"ಬಜೆಟ್ ಮಂಡಿಸುವುದು ಸಾಂವಿಧಾನಿಕ ಅಗತ್ಯತೆ" ಎಂದು ಜೇಟ್ಲಿ ಹೇಳಿದ್ದಾರೆ.
ವಿಧಾನಸಭಾ ಚುನಾವಣೆಗಳು ಮುಗಿಯುವವರೆಗೆ ಸಂಸತ್ತಿನಲ್ಲಿ ಬಜೆಟ್ ಮಂಡನೆಯನ್ನು ಮುಂದೂಡಬೇಕು ಎಂದು ಬುಧವಾರ ಶಿವಸೇನಾ ಅಧ್ಯಕ್ಷ ಉದ್ಧವ್ ಠಾಕ್ರೆ ಆಗ್ರಹಿಸಿದ್ದರು.
ಯಾರನ್ನು ಹೆಸರಿಸದ ಜೇಟ್ಲಿ "ನೋಟು ಹಿಂಪಡೆತ ನಿರ್ಧಾರದ ವಿರುದ್ಧ ಪ್ರತಿಭಟಿಸಿದ ಪಕ್ಷ ಕೂಡ ಇದೆ; ಅವರಿಗೆ ಬಜೆಟ್ ಮಂಡಿಸುವುದರ ಬಗ್ಗೆ ಚಿಂತೆಯೇಕೆ" ಎಂದು ಕೂಡ ಹೇಳಿದ್ದಾರೆ.
೨೦೧೪ ರ ಲೋಕಸಭಾ ಚುನಾವಣೆಗೂ ಮುಂಚೆ ಮಧ್ಯಂತರ ಬಜೆಟ್ ಮಂಡಿಸಲಾಗಿತ್ತು ಮತ್ತು ಈ ಹಿಂದೆ ಕೂಡ ಚುನಾವಣೆಗಳಿಗೆ ಮೊದಲು ಬಜೆಟ್ ಗಳನ್ನು ಮಂಡಿಸಲಾಗಿದೆ ಎಂದು ಸಚಿವ ಹೇಳಿದ್ದಾರೆ.
ಇದಕ್ಕೂ ಮುಂಚೆ ಪ್ರತಿಕ್ರಿಯಿಸಿದ್ದ ಮುಖ್ಯ ಚುನಾವಣಾ ಆಯುಕ್ತ ನಜೀಮ್ ಜೈದಿ, ವಿವಿಧ ಪಕ್ಷಗಳು ಬಜೆಟ್ ಮಂಡನೆ ಮುಂದೂಡುವುದಕ್ಕೆ ಮಾಡಿರುವ ಮನವಿಯನ್ನು ಪರಿಶೀಲಿಸಿ ಚರ್ಚಿಸಲಾಗುವುದು ಎಂದಿದ್ದರು.