ಪ್ರಧಾನ ಸುದ್ದಿ

ಮದುರೈ ಹೊರತುಪಡಿಸಿ ತಮಿಳುನಾಡಿನಾದ್ಯಂತ ಜಲ್ಲಿಕಟ್ಟು ಆಚರಣೆ, ಇಬ್ಬರು ಸಾವು, 28 ಮಂದಿಗೆ ಗಾಯ

Lingaraj Badiger
ಚೆನ್ನೈ: ಸುಗ್ರೀವಾಜ್ಞೆ ನಂತರ ತಮಿಳುನಾಡಿನ ಹಲವುಕಡೆ ಭಾನುವಾರ ಜಲ್ಲಿಕಟ್ಟು ಸ್ಪರ್ಧೆ ಆರಂಭವಾಗಿದ್ದು, ಸ್ಪರ್ಧೆಯ ವೇಳೆ ಗೂಳಿ ತಿವಿದು ಇಬ್ಬರು ಮೃತಪಟ್ಟಿದ್ದಾರೆ ಮತ್ತು 28 ಮಂದಿ ಗಾಯಗೊಂಡಿದ್ದಾರೆ. ಇನ್ನೊಂದೆಡೆ ಮಧುರೈನ ಅಲಂಗನಲ್ಲೂರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಓರ್ವ ವ್ಯಕ್ತಿ ಅಸೌಖ್ಯಕ್ಕೀಡಾಗಿ ಮೃತಪಟ್ಟಿದ್ದಾರೆ.
ಈ ಮಧ್ಯೆ ಜಲ್ಲಿಕಟ್ಟು ಸ್ಪರ್ಧೆಗೆ ಶಾಶ್ವತ ಪರಿಹಾರ ಸಿಗಬೇಕು ಮತ್ತು ಪ್ರಾಣಿ ದಯಾ ಸಂಘ ಪೆಟಾ ನಿಷೇಧಿಸಬೇಕು ಎಂದು ಒತ್ತಾಯಿಸಿ ಚೆನ್ನೈನ ಮರೀನಾ ಬೀಚ್‌ ಹಾಗೂ ಮದುರೈನಲ್ಲಿ ಪ್ರತಿಭಟನೆ ಮುಂದುವರೆದಿದೆ.
ಇಂದು ಬೆಳಗ್ಗೆ ಮದುರೈನ ಅಲಂಗನಲ್ಲೂರ್​ನಲ್ಲಿ ಮುಖ್ಯಮಂತ್ರಿ ಓ ಪನ್ನೀರ ಸೆಲ್ವಂ ಅವರು ಜಲ್ಲಿಕಟ್ಟು ಸ್ಪರ್ಧೆ ಚಾಲನೆ ನೀಡಬೇಕಿತ್ತು. ಆದರೆ ಇದಕ್ಕೆ ಅವಕಾಶ ನೀಡದ ಜನ, ಜಲ್ಲಿಕಟ್ಟುಗೆ ಶಾಶ್ವತ ಪರಿಹಾರ ಬೇಕು ಎಂದು ಒತ್ತಾಯಿಸಿದ್ದಾರೆ. ಹೀಗಾಗಿ ಜಲ್ಲಿಕಟ್ಟು ಸ್ಪರ್ಧೆ ದಿಂಡಿಗಲ್​ಗೆ ಸ್ಥಳಾಂತರಗೊಂಡಿದೆ. 
ತಿರುಚ್ಚರಪಳ್ಳಿಯ ಮನಪರೈನ ಪುದುಪಟ್ಟಿ ಗ್ರಾಮದಲ್ಲಿ ಜಲ್ಲಿಕಟ್ಟು ಸ್ಪರ್ಧೆ ಆರಂಭಗೊಂಡಿದ್ದು, ಸುಮಾರು 100ಕ್ಕು ಹೆಚ್ಚು ಹೋರಿಗಳು ಮತ್ತು 500ಕ್ಕೂ ಹೆಚ್ಚು ಜಲ್ಲಿಕಟ್ಟು ಸ್ಪರ್ಧಾ ತಂಡಗಳು ಭಾಗವಹಿಸಿವೆ.
ವಿವಿಧ ಜಿಲ್ಲೆಗಳಲ್ಲಿ ನಡೆದ ಸ್ಪರ್ಧೆಗಳಲ್ಲಿ ಯುವಕರು ಹೋರಿಯನ್ನು ಪಳಗಿಸಲು ಹೋರಿಯ ಬೆನ್ನಟ್ಟಿ ಸಾಹಸಕ್ಕೆ ಮುಂದಾದ ವೇಳೆ 28 ಮಂದಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇತ್ತೀಚಿಗೆ ಬಂದ ವರದಿಗಳ ಪ್ರಕಾರ, ಪುದುಕೊಟ್ಟಾಯಿನ ರಾಕೂಸಲ್ ದಲ್ಲಿ ಗೂಳಿ ತಿವಿತದಿಂದಾಗಿ ಮೋಹನ್ ಹಾಗೂ ರಾಜು ಎಂಬ ಯುವಕರು ಮೃತಪಟ್ಟಿದ್ದಾರೆ. ಮತ್ತೊರ್ವ ಯುವಕ ಗಂಭೀರವಾಗಿ ಗಾಯಗೊಂಡಿದ್ದು, ತಿರುಚಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
SCROLL FOR NEXT