ಪಾಟ್ನಾ: ಊಹಾಪೋಹಗಳಿಗೆ ತೆರೆ ಎಳೆದಿರುವ ಜನತಾ ದಳ ಸಂಯುಕ್ತ ಪಕ್ಷ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗಳಿಂದ ದೂರ ಉಳಿಯುವುದಾಗಿ ಬುಧವಾರ ಘೋಷಿಸಿದೆ.
"ಜಾತ್ಯಾತೀತ ಮತಗಳು ಒಡೆದುಹೋಗದಂತೆ ನೋಡಿಕೊಂಡು ಕೋಮುವಾದಿ ಶಕ್ತಿಗಳು ಗೆಲ್ಲದಂತೆ ಮಾಡಲು ಉತ್ತರಪ್ರದೇಶದಲ್ಲಿ ಜೆಡಿಯು ಸ್ಪರ್ಧಿಸುವುದಿಲ್ಲ" ಎಂದು ಜೆಡಿಯು ರಾಷ್ಟ್ರೀಯ ವಕ್ತಾರ ಕೆ ಸಿ ತ್ಯಾಗಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
"ಬಿಜೆಪಿ ವಿರೋಧಿ ಮತಗಳನ್ನು ಒಡೆಯುವುದು ಬೇಡ" ಎಂದು ಮುಖಂಡರು ಒಪ್ಪಿಕೊಂಡ ಮೇಲೆ ಪಕ್ಷ ಈ ನಿರ್ಣಯ ತೆಗೆದುಕೊಂಡಿರುವುದಾಗಿ ತ್ಯಾಗಿ ಹೇಳಿದ್ದಾರೆ.
ಬಿಹಾರ ಮಾದರಿಯಲ್ಲಿ ಉತ್ತರಪ್ರದೇಶದಲ್ಲಿ ಮಹಾ ಮೈತ್ರಿಯನ್ನು ಸಾಧಿಸಲು ಸಾಧ್ಯವಾಗದೆ ಇರುವುದಕ್ಕೆ ಅವರು ಅಸಂತೋಷ ವ್ಯಕ್ತಪಡಿಸಿದ್ದಾರೆ.
ಉತ್ತರಪ್ರದೇಶ ಚುನಾವಣೆಗಳಲ್ಲಿ ಸ್ಪರ್ಧಿಯುವ ಸಲುವಾಗಿ ಕಳೆದ ವರ್ಷ ಐದಾರು ರ್ಯಾಲಿಗಳನ್ನುದ್ದೇಶಿಸಿ ಬಿಹಾರ ಮುಖಮಂತ್ರಿ, ಜೆಡಿಯು ಮುಖಂಡ ನಿತೀಶ್ ಕುಮಾರ್ ಮಾತನಾಡಿದ್ದರು.