ಪ್ರಧಾನ ಸುದ್ದಿ

ಶಿರಚ್ಛೇಧ ಹೇಳಿಕೆ; ಆರ್ ಎಸ್ ಎಸ್ ಮುಖಂಡನ ವಿರುದ್ಧ ಪ್ರಕರಣ ದಾಖಲಿಸಿದ ಪೊಲೀಸರು

Guruprasad Narayana
ಉಜ್ಜಯಿನಿ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಶಿರಚ್ಛೇಧಕ್ಕೆ ೧ ಕೋಟಿ ರೂ ಬಹುಮಾನ ಘೋಷಿಸದ್ದ ಆರ್ ಎಸ್ ಎಸ್ ಮುಖಂಡ ಕುಂದನ್ ಚಂದ್ರವತ್ತ್ ವಿರುದ್ಧ ಮಧ್ಯಪ್ರದೇಶ ಪೊಲೀಸರು ಶನಿವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ. 
"ಕುಂದನ್ ಚಂದ್ರವತ್ತ್ ನೀಡಿರುವ ಹೇಳಿಕೆಯ ಆಧಾರದಲ್ಲಿ ಸೆಕ್ಷನ್ ೫೦೫ (ಶಾಂತಿ ಕದಡುವ ಬೆದರಿಕೆ ಮತ್ತು ಕೋಮು ದ್ವೇಷದ ಭಯ ಹಬ್ಬಿಸುವ) ಅಡಿಯಲ್ಲಿ ಶುಕ್ರವಾರ ರಾತ್ರಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ" ಎಂದು ಮಾಧ್ವನಗರ್ ಪೊಲೀಸ್ ಠಾಣೆಯ ಮುಖ್ಯಸ್ಥ ಎಂ ಎಸ್ ಪರ್ಮಾರ್ ಹೇಳಿದ್ದಾರೆ. 
ಈ ಹೇಳಿಕೆಗೆ ತೀವ್ರ ವಿರೋಧ ಬಂದಿರುವ ಹಿನ್ನಲೆಯಲ್ಲಿ ಶುಕ್ರವಾರ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ತವ್ಯಗಳಿಂದ ಅವರನ್ನು ಮುಕ್ತಗೊಳಿಸಲಾಗಿತ್ತು. 
"ಅವರ ವಿವಾದಾತ್ಮಕ ಹೇಳಿಕೆಗಳಿಂದ ಆರ್ ಎಸ್ ಎಸ್ ಬಗ್ಗೆ ಗೊಂದಲಗಳು ಸೃಷ್ಟಿಯಾಗಿವೆ. ಆದುದರಿಂದ ಅವರನ್ನು ಕರ್ತವ್ಯಮುಕ್ತಗೊಳಿಸಲಾಗಿದೆ" ಎಂದು ಆರ್ ಎಸ್ ಎಸ್ ಪ್ರಾದೇಶಿಕ ಅಧ್ಯಕ್ಷ ಪ್ರಕಾಶ್ ಶಾಸ್ತ್ರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. 
ಆರ್ ಎಸ್ ಎಸ್ ಉಜ್ಜಯಿನಿಯ ಸಹ ಪ್ರಚಾರ ಮುಖ್ಯಸ್ಥ ಬುಧವಾರ ಈ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹೇಳಿಕೆ ನನ್ನ ಸ್ವಂತದ್ದು, ಆರ್ ಎಸ್ ಎಸ್ ನದಲ್ಲ ಎಂದು ಅವರು ಗುರುವಾರ ಹೇಳಿದ್ದರು. 
SCROLL FOR NEXT