ಮುಂಬಯಿ: ಬೃಹನ್ ಮುಂಬೈ ಮಹಾನಗರ ಪಾಲಿಕೆ(ಬಿಎಂಸಿ) ಮೇಯರ್ ಮತ್ತು ಉಪ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಸ್ಪರ್ಧಿಸುವುದಿಲ್ಲ ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಘೋಷಿಸಿದ ನಂತರ ಶಿವಸೇನೆ ತನ್ನ ಅಭ್ಯರ್ಥಿಯ ಹೆಸರನ್ನು ಪ್ರಕಟಿಸಿದೆ.
ವಿಶ್ವನಾಥ್ ಮಹದೇಶ್ವರ್ ಮೇಯರ್ ಅಭ್ಯರ್ಥಿ ಹಾಗೂ ಹರೇಶ್ವರ್ ವರ್ಲಿಕರ್ ಅವರ ಹೆಸರನ್ನು ಉಪ ಮೇಯರ್ ಪಟ್ಟಕ್ಕೆ ಶಿವಸೇನೆ ಸೂಚಿಸಿದೆ.
ಎಂಸಿ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಸ್ಪರ್ಧಿಸುವುದಿಲ್ಲ. ಆದರೆ ನಮ್ಮ ಕಾರ್ಪೋರೇಟರ್ ಗಳು ಬಿಎಂಸಿಯಲ್ಲಿ ಪಾರದರ್ಶಕತೆಯನ್ನು ಗಮನಿಸುತ್ತಾರೆ ಎಂದು ಫಡ್ನವಿಸ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದೇ ವೇಳೆ ಮಹಾರಾಷ್ಟ್ರ ಸರ್ಕಾರದ ಸ್ಥಿರತೆ ಬಗ್ಗೆ ಯಾವುದೇ ಅನುಮಾನ ಬೇಡ ಎಂದಿರುವ ಸಿಎಂ, ನಮ್ಮ ಸರ್ಕಾರಕ್ಕೆ ಯಾವುದೇ ಬೆದರಿಕೆ ಇಲ್ಲ. ಸ್ಥಿರವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಬಿಎಂಸಿಯಲ್ಲಿ ನಾವು ಪ್ರತಿಪಕ್ಷವಾಗಿ ಕುಳಿತುಕೊಳ್ಳುವುದಿಲ್ಲ. ಬದಲಾಗಿ ಆಡಳಿತ ಪಕ್ಷಕ್ಕೆ ಬೆಂಬಲ ನೀಡುತ್ತೇವೆ. ಆದರೆ ಪಾರದರ್ಶಕತೆಯಲ್ಲಿ ಯಾವುದೇ ರಾಜಿ ಇಲ್ಲ ಎಂದು ಹೇಳುವ ಮೂಲಕ ಫಢ್ನವಿಸ್ ಅವರು ಪರೋಕ್ಷವಾಗಿ ಶಿವಸೇನೆಗೆ ಬೆಂಬಲ ನೀಡಿದ್ದಾರೆ.