ಸಂಗ್ರಹ ಚಿತ್ರ 
ಪ್ರಧಾನ ಸುದ್ದಿ

ಉತ್ತರ ಪ್ರದೇಶದಲ್ಲಿ ಬಿಜೆಪಿ ಗೆಲುವಿಗೆ ಕಾರಣವಾದ 10 ಅಂಶಗಳು

ಇಡೀ ದೇಶದ ಗಮನ ಸೆಳೆದಿದ್ದ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತೀಯ ಜನತಾ ಪಾರ್ಟಿ ಭಾರಿ ಮುನ್ನಡೆ ಸಾಧಿಸಿದ್ದು, ಅಧಿಕಾರದ ಗದ್ದುಗೆಯತ್ತ ಮುಖ ಮಾಡಿದೆ.

ಲಖನೌ: ಇಡೀ ದೇಶದ ಗಮನ ಸೆಳೆದಿದ್ದ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತೀಯ ಜನತಾ ಪಾರ್ಟಿ ಭಾರಿ ಮುನ್ನಡೆ ಸಾಧಿಸಿದ್ದು, ಅಧಿಕಾರದ ಗದ್ದುಗೆಯತ್ತ ಮುಖ ಮಾಡಿದೆ.

ಪ್ರಮುಖವಾಗಿ ಎಸ್ ಪಿ ಪಕ್ಷದೊಳಗಿನ ಆಂತರಿಕ ಭಿನ್ನಮತದಿಂದಾಗಿ ಮತದಾರರು  ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವಕ್ಕೆ ಮತ ನೀಡಿದ್ದು, ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದ್ದ ಕಾಂಗ್ರೆಸ್ ಪಕ್ಷಕ್ಕೂ  ತೀವ್ರ ಮುಖಭಂಗವಾಗಿದೆ. ಇನ್ನು ಮಹಾ ಮೈತ್ರಿಕೂಟಕ್ಕೆ ಪರೋಕ್ಷ ಬೆಂಬಲ ನೀಡುತ್ತಲೇ ಚುನಾವಣಾ ಫಲಿತಾಂಶದವರೆಗೂ ಕಾದುನೋಡುವ ತಂತ್ರಕ್ಕೆ ಮೊರೆ ಹೋಗಿದ್ದ ಬಿಎಸ್ ಪಿ ಪಕ್ಷ ಕೂಡ ಚುನಾವಣೆಯಲ್ಲಿ ತೀವ್ರ ಹಿನ್ನಡೆ  ಅನುಭವಿಸಿದ್ದು, ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಇನ್ನು ಯಾವುದೇ ಕಾರಣಕ್ಕೂ ಕೋಮವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕು ಮತ್ತು ಅನಿವಾರ್ಯವಾದರೆ ಬಿಎಸ್ ಪಿಯೊಂದಿಗೆ ಕೈ ಜೋಡಿಸಿ ಅಧಿಕಾರ  ರಚಿಸುತ್ತೇನೆ ಎಂದು ಹೇಳುತ್ತಿದ್ದ ಎಸ್ ಪಿ ಮುಖಂಡ ಹಾಗೂ ಹಾಲಿ ಸಿಎಂ ಅಖಿಲೇಶ್ ಯಾದವ್ ಅವರ ನಾಯಕತ್ವಕ್ಕೆ ಸೋಲಾಗಿದೆ.

ಉತ್ತರ ಪ್ರದೇಶದಲ್ಲಿ ಬಿಜೆಪಿ ಗೆಲುವಿಗೆ ಕಾರಣವಾದ ಪ್ರಮುಖ ಅಂಶಗಳು ಇಲ್ಲಿವೆ.
1. ಮೋದಿ ನಾಯಕತ್ವ
ಚುನಾವಣೆ ಆರಂಭವಾದ ದಿನದಿಂದಲೂ ಉತ್ತರ ಪ್ರದೇಶ ಬಿಜೆಪಿ ನಾಯಕರು ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಲ್ಲೇ ಇಡೀ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದರು. ಅದರಂತೆ ಪ್ರಧಾನಿ ನರೇಂದ್ರ ಮೋದಿ ಕೂಡ ಉತ್ತರ  ಪ್ರದೇಶ ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿಪಾಲ್ಗೊಂಡಿದ್ದರು. ಅಲ್ಲದೆ ಅಧಿಕಾರಕ್ಕೇರಿದ ಬಳಿಕ ತಾವು ಕೈಗೊಂಡ ಮತ್ತು ಜಾರಿ ಮಾಡಿದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜನರಿಗೆ ತಿಳಿಸುವ ಪ್ರಯತ್ನ ಮಾಡಿದ್ದರು.

2. ರಾಜ್ಯ ಬಿಜೆಪಿ ನಾಯಕತ್ವ
ಇಡೀ ಉತ್ತರ ಪ್ರದೇಶ ಚುನಾವಣೆಯಲ್ಲಿ ಗಮನ ಸೆಳೆದ ಪ್ರಮುಖ ಅಂಶವೆಂದರೆ ರಾಜ್ಯ ಬಿಜೆಪಿ ನಾಯಕತ್ವ. ಚುನಾವಣೆ ಘೋಷಣೆಯಾದ ಬಳಿಕ ಬಿಜೆಪಿ ರಾಷ್ಟಾಧ್ಯಕ್ಷ ಅಮಿತ್ ಶಾ ಅವರು ಉತ್ತರ ಪ್ರದೇಶದ ಅತೀ ದೊಡ್ಡ  ಹಿಂದುಳಿದ ಕುಶ್ವಾಹ್-ಮೌರ್ಯ ಸಮಾಜಕ್ಕೆ ಸೇರಿದ  ಕೇಶವ್ ಪ್ರಸಾದ್ ಮೌರ್ಯ ಅವರಿಗೆ ಉತ್ತರ ಪ್ರದೇಶ ಬಿಜೆಪಿ ನೇತೃತ್ವ ನೀಡಿದರು. ಇದೇ ನೀತಿಯನ್ನೇ ಈ ಹಿಂದೆ ಕಲ್ಯಾಣ್ ಸಿಂಗ್ ಅವರೂ ಕೂಡ ಅನುಸರಿಸಿ ಗೆಲುವು  ಸಾಧಿಸಿದ್ದರು.

3. ಬಿಜೆಪಿ ಚುನಾವಣಾ ರಣತಂತ್ರ, ಜಾತಿ ಆಧಾರಿತ ಗುರಿ
ಉತ್ತರ ಪ್ರದೇಶದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿರುವ ಹಿಂದುಳಿದ ವರ್ಗಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಬಿಜೆಪಿ ಚುನಾವಣಾ ರಣತಂತ್ರ ಹೆಣೆದಿತ್ತು. ಪ್ರಮುಖವಾಗಿ ಉತ್ತರ ಪ್ರದೇಶದಲ್ಲಿ ಉನ್ನತ ವರ್ಗ ಹಾಗೂ ಜಾತಿಗಳಾದ  ಬ್ರಾಹ್ಮಣ, ಠಾಕೂರ್ ಮತಗಳನ್ನು ಗಟ್ಟಿಗೊಳಿಸಿಕೊಂಡ ಬಿಜೆಪಿ, ಹಿಂದುಳಿದ ವರ್ಗಗಳಾದ ಯಾದವ್, ಕುಶ್ವಾಹ್-ಮೌರ್ಯ, ಕುರ್ಮಿ ಮತ್ತು ಲೋಧ್ ಜಾತಿಗಳ ಮತಗಳ ಮೇಲೆ ಕಣ್ಣಿಟ್ಟು ಅದರಲ್ಲಿ ಯಶಸ್ವೀ ಕೂಡ ಆಯಿತು.  ಪ್ರಮುಖವಾಗಿ ಉತ್ತರ ಪ್ರದೇಶದಲ್ಲಿ ಬಲಿಷ್ಠವಾಗಿರುವ ಯಾದವ ಮತ್ತ ಜಾಟ್ ಸಮುದಾಯವನ್ನು ಪಕ್ಕಕ್ಕಿಟ್ಟು, ಲೋಧ್, ರಾಜ್ ಭರ್, ಸೈನಿ, ಗುಜ್ಜರ್, ಶಖ್ಯಾ, ಮೌರ್ಯ, ಧಂಕರ್, ನಿಶಾದ್ ಮತ್ತು ಕೇವತ್ ಸಮುದಾಯಕ್ಕೆ ಸೇರಿದ  170 ಮಂದಿ ಅಭ್ಯರ್ಥಿಗಳಿಗೆ ಅವಕಾಶ ನೀಡುವ ಮೂಲಕ ಎದುರಾಳಿ ಪಕ್ಷಗಳ ಜಾತಿ ರಣತಂತ್ರವನ್ನೇ ಬುಡಮೇಲು ಮಾಡಿತು. ಆ ಮೂಲಕ ಹಿಂದುಳಿದ ವರ್ಗಗಳ ಮತಗಳು ಬಿಜೆಪಿ ಪಾಲಿಗೆ ಬಿದ್ದಿದೆ.

4. ಮುಸ್ಲಿಂ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ
ಉತ್ತರ ಪ್ರದೇಶದಲ್ಲಿ ಹಿಂದುಳಿದ ವರ್ಗಗಳಂತೆಯೇ ಮುಸ್ಲಿಂ ಸಮುದಾಯದ ಮತದಾರರ ಸಂಖ್ಯೆಕೂಡ ಹೆಚ್ಚಿನ ಸಂಖ್ಯೆಯಲ್ಲಿದೆ. ಇಂತಹ ಕ್ಷೇತ್ರಗಳಲ್ಲೂ ಬಿಜೆಪಿ ಮುನ್ನಡೆ ಸಾಧಿಸಿರುವುದು ಬಿಜೆಪಿ ಗೆಲುವಿಗೆ ಕಾರಣವಾಗಿದೆ. ಮುಸ್ಲಿಂ  ಪ್ರಾಬಲ್ಯವಿರುವ ಒಟ್ಟು 100 ಕ್ಷೇತ್ರಗಳ ಪೈಕಿ 42 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಮುನ್ನಡೆ ಸಾಧಿಸಿರುವುದು ಮುಸ್ಲಿಂ ಮತದಾರರು ಕೂಡ ಬಿಜೆಪಿ ಕೈ ಹಿಡಿದಿರುವುದಕ್ಕೆ ಸಾಕ್ಷಿಯಾಗಿದೆ. ಇನ್ನು ಮುಸ್ಲಿಂ ಪ್ರಾಬಲ್ಯವಿರುವ ಕ್ಷೇತ್ರಗಳ  ಮತಗಳು ಬಿಜೆಪಿಗೆ ಹೋಗುವುದಿಲ್ಲ ಎಂಬ ಎಸ್ ಪಿ-ಕಾಂಗ್ರೆಸ್ ನ ಲೆಕ್ಕಾಚಾರ ಈ ಮೂಲಕ ತಲೆಕೆಳಗಾಗಿದೆ.

5. ಯಶಸ್ಸು ತಂದ ಬಿಜೆಪಿ ಮೈತ್ರಿಕೂಟ
ಉತ್ತರ ಪ್ರದೇಶದಲ್ಲಿ ಬಿಜೆಪಿ ಅಪ್ನಾದಳ್, ಸುಹೇಲ್ ದೇವ್ ಭಾರತೀಯ ಸಮಾಜ್ ಪಾರ್ಟಿಗಳೊಂದಿಗೆ ಮೈತ್ರಿ ಮಾಡಿಕೊಂಡಿತು. ಪೂರ್ವಾಂಚಲ ಮತ್ತು ಮಧ್ಯ ಉತ್ತರ ಪ್ರದೇಶದಲ್ಲಿ ಪಟೇಲ್ ಕುರ್ಮಿ ಮತದಾರರ ಸಂಖ್ಯೆ  ಹೆಚ್ಚಾಗಿದ್ದು, ಅಪ್ನಾ ದಳ್ ಪಕ್ಷ ಈ ಸಮುದಾವನ್ನು ಪ್ರತಿನಿಧಿಸುತ್ತಿದೆ. ಇನ್ನು ಸುಹೇಲ್ ದೇವ್ ಭಾರತೀಯ ಸಮಾಜ್ ಪಾರ್ಟಿ ಅತ್ಯಂತ ಹಿಂದುಳಿದಿರುವ ರಾಜ್ ಭರ್ ಸಮುದಾವನ್ನು ಪ್ರತಿನಿಧಿಸುತ್ತಿದ್ದು, ಪೂರ್ವ ಉತ್ತರ ಪ್ರದೇಶದಲ್ಲಿ  ಈ ಮತದಾರರ ಸಂಖ್ಯೆ ಹೆಚ್ಚಿನ ಸಂಖ್ಯೆಯಲ್ಲಿದೆ. ಹೀಗಾಗಿ ಇಲ್ಲಿ ಬಿಜೆಪಿ ಮತ್ತು ಎಸ್ ಪಿ ಪಕ್ಷಗಳ ಪ್ರಾಬಲ್ಯ ಗಣನೀಯ ಪ್ರಮಾಣದಲ್ಲಿ ಕುಂಠಿತವಾಗಿದೆ.

6.ತಂತ್ರಗಾರಿಕೆಯ ಬಿಜೆಪಿ ಪ್ರಚಾರ
ಉತ್ತರ ಪ್ರದೇಶ ಚುನಾವಣೆ ಸಂಬಂಧ ಪ್ರಚಾರ ಕಾರ್ಯದಲ್ಲಿ ಬಿಜೆಪಿ ಕೆಲವೇ ಆಯ್ದ ನಾಯಕರುಗಳನ್ನು ಮಾತ್ರ ಆಯ್ಕೆ ಮಾಡಿತ್ತು. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಉತ್ತರ ಪ್ರದೇಶ ಬಿಜೆಪಿ ಘಚಕದ ಸಾರಥಿ ಕೇಶವ್  ಪ್ರಸಾದ್ ಮೌರ್ಯ, ಕೇಂದ್ರ ಸಚಿವರಾದ ರಾಜ್ ನಾಥ್ ಸಿಂಗ್, ಉಮಾಭಾರತಿ ಮತ್ತು ಕಲ್ರಾಜ್ ಮಿಶ್ರಾ ಅವರನ್ನು ಮಾತ್ರ ಪೋಸ್ಟರ್ ಗಳಲ್ಲಿ ಪ್ರಮುಖವಾಗಿ ಬಳಸಿಕೊಳ್ಳಲಾಗಿತ್ತು. ಈ ನಾಯಕರ ಆಯ್ಕೆ ಕೂಡ ತೀರಾ ಅಳೆದು ತೂಗಿ  ನಿರ್ಧರಿಸಲಾಗಿತ್ತು. ಈ ಪೈಕಿ ರಾಜ್ ನಾಥ್ ಸಿಂಗ್ ಠಾಕೂರ್ ಜಾತಿ ಮತದಾರರು ಹೆಚ್ಚಾಗಿರುವ ಪ್ರದೇಶಗಳಲ್ಲಿ ಪ್ರಚಾರ ನಡೆಸಿದರೆ, ಕಲ್ರಾಜ್ ಮಿಶ್ರಾ ಬ್ರಾಹ್ಮಣ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರದೇಶಗಳಲ್ಲಿ  ಭರ್ಜರಿ ಪ್ರಚಾರ ನಡೆಸಿ ಬ್ರಾಹ್ಮಣ ಮತ್ತು ಮೇಲ್ವರ್ಗದ ಜಾತಿಗಳ ಮತಗಳನ್ನು ಗಟ್ಟಿಗೊಳಿಸಿದರು.

7.ಬಿಜೆಪಿಗೆ ಬಲ ತಂದ ವಲಸೆ ನಾಯಕರು
2007ರಲ್ಲಿ ಮಾಯಾವತಿ ನೇತೃತ್ವದ ಬಿಎಸ್ ಪಿ ಅಧಿಕಾರದ ಗುದ್ದುಗೆ ಏರಲು ಪ್ರಮುಖ ಕಾರಣರಾಗಿದ್ದ, ಬಿಎಸ್ ಪಿ ಮುಖಂಡರಾದ ಬ್ರಜೇಶ್ ಪಾಠಕ್, ಸ್ವಾಮಿ ಪ್ರಸಾದ್ ಮೌರ್ಯ, ಆರ್ ಕೆ ಮೌರ್ಯ ರಂತಹ ಪ್ರಭಾವಿ ನಾಯಕರು  ಬಿಎಸ್ ಪಿ ತೊರದೆ ಬಿಜೆಪಿ ಸೇರ್ಪಡೆಯಾಗಿದ್ದರು. ಆ ಮೂಲಕ ಬಿಎಸ್ ಪಿ ಮತಗಳು ಬಿಜೆಪಿ ಪಾಲಾಗಿದ್ದು, ಇದೂ ಕೂಡ ಬಿಜೆಪಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದೆ. ಯಾವ ಯಾವ ಕ್ಷೇತ್ರಗಳಲ್ಲಿ ಬಿಜೆಪಿ ಬಲ ಕುಂಠಿತವಾಗಿತ್ತೋ  ಆ ಎಲ್ಲ ಪ್ರದೇಶಗಳಲ್ಲಿ ಇತರೆ ಪಕ್ಷದ ಪ್ರಭಾವಿ ನಾಯಕರನ್ನು ಬಿಜೆಪಿಗೆ ಕರೆತರಲಾಗಿತ್ತು.

8. ಬಿಜೆಪಿಯ ಹಿಂದುತ್ವ ಅಜೆಂಡಾ
ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಒಂದೇ ಒಂದು ಟಿಕೆಟ್ ಅನ್ನೂ ಕೂಡ ಮುಸ್ಲಿಂ ಅಭ್ಯರ್ಥಿಗಳಿಗೆ ನೀಡಿಲ್ಲ. ಇದೇ ಬಿಜೆಪಿಗೆ ಮುಳುವಾಗುತ್ತದೆ ಎಂದು ಅಂದಾಜಿಸಲಾಗಿತ್ತು. ಆದರೆ ಮುಸ್ಲಿಂ ಸಮುದಾಯದ ಪ್ರಭಾವಿ  ಮುಖಂಡರು ಪ್ರಚಾರದ ಸಂದರ್ಭದಲ್ಲಿ ಬಿಜೆಪಿ ಪರವಾಗಿ ಮಾತನಾಡಿದ್ದರು.ಇದಲ್ಲದೆ ಪ್ರಚಾರದ ಸಂದರ್ಭದಲ್ಲಿ ಹಿಂದುತ್ವ ಅಜೆಂಡಾವವನ್ನು ಗಟ್ಟಿಯಾಗಿ ಹಿಡಿದಿದ್ದ ಪ್ರಧಾನಿ ಮೋದಿ, "ಗ್ರಾಮಗಳಲ್ಲಿ ಖಬ್ರಿಸ್ಥಾನ (ಮುಸ್ಲಿಮರ  ಸ್ಮಶಾನ) ಇದ್ದರೆ ಸ್ಮಶಾನ ಕೂಡ ಇರಲೇಬೇಕು, ರಂಜಾನ್ ಸಂದರ್ಭದಲ್ಲಿ ವಿದ್ಯುತ್ ಪೂರೈಕೆ ನಿರಂತರವಾಗಿದ್ದರೆ ದೀಪಾವಳಿ ಸಂದರ್ಭದಲ್ಲೂ ಅದೇ  ಪರಿಸ್ಥಿತಿ ಇರಬೇಕು" ಎಂದು ಹೇಳುವ ಮೂಲಕ ಹಿಂದೂ ಮತದಾರರ  ವೊಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.

9.ಎಸ್ ಪಿ-ಕಾಂಗ್ರೆಸ್ ಮೈತ್ರೀಕೂಟ ವೈಫಲ್ಯ
ಆಂತರಿಕ ಭಿನ್ನಮತ ಹಾಗೂ ಬಂಡಾಯ ರಾಜಕೀಯದಿಂದಾಗಿ ಭಾರಿ ಸುದ್ದಿಗೆ ಗ್ರಾಸವಾಗಿದ್ದ ಸಮಾಜವಾದಿ ಪಕ್ಷ ಚುನಾವಣೆಗೂ ಮೊದಲೇ ತನ್ನ ಸೋಲೊಪ್ಪಿಕೊಂಡಿತ್ತು. ಚುನಾವಣೆಯಲ್ಲಿ ಹಿನ್ನಡೆಯಾಗುವ ಭೀತಿಯಿಂದ  ಸಮಾಜವಾದಿ ಪಕ್ಷ ಕಾಂಗ್ರೆಸ್ ಜೊತೆ ಕೈಜೋಡಿಸಿತ್ತು. ಇದು ಎಸ್ ಪಿಗೆ ಮೊದಲ ಹಿನ್ನಡೆಯಾದರೆ, ರಾಹುಲ್ ಗಾಂಧಿ ನಾಯಕತ್ವಕ್ಕೆ ಕಾಂಗ್ರೆಸ್ ಪಕ್ಷದಲ್ಲೇ ಅಸಮಾಧಾನವಿರುವುದು ಕಾಂಗ್ರೆಸ್ ಪಕ್ಷದ ಹಿನ್ನಡೆಗೆ ಕಾರಣವಾಗಿತ್ತು.  ಇನ್ನು ಸೀಟು ಹಂಚಿಕೆ ಸಂಬಂಧ ಕೂಡ ಕಾಂಗ್ರೆಸ್ ಎಸ್ ಪಿ ನಡುವೆ ಅಲ್ಪ ಪ್ರಮಾಣದ ಜಟಾಪಟಿ ನಡೆದಿತ್ತು. ರಾಹುಲ್ ಬದಲಿಗೆ ಪ್ರಿಯಾಂಕಗಾಂಧಿಗೆ ಪಕ್ಷದ ನೇತೃತ್ವ ನೀಡುವಂತೆ ಕಾಂಗ್ರೆಸ್ ನ ಕೆಲ ಕಾರ್ಯಕರ್ತರು  ಒತ್ತಾಯಿಸಿದ್ದರು.

10. ಸಿಎಂ ಅಭ್ಯರ್ಥಿಯನ್ನೇ ಘೋಷಿಸದ ಬಿಜೆಪಿ ನಡೆ
ಪ್ರಮುಖವಾಗಿ ಈ ಹಿಂದಿನಂತೆಯೇ ಈ ಬಾರಿಯೂ ಬಿಜೆಪಿ ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡದೆಯೇ ಸಾಮೂಹಿಕ ನಾಯಕತ್ವದ ಮೂಲಕ ಚುನಾವಣಾ ಪ್ರಚಾರಕ್ಕೆ ಇಳಿದಿತ್ತು, ಕೇಶವ್  ಪ್ರಸಾದ್ ಮೌರ್ಯ ಅವರಿಗೆ ಬಿಜೆಪಿ ರಾಜ್ಯ ಘಟಕದ ನೇತೃತ್ವ ವಹಿಸಿತ್ತಾದರೂ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಮಾತ್ರ ಘೋಷಣೆ ಮಾಡಿರಲಿಲ್ಲ. ಈ ಹಿಂದೆ ಬಿಹಾರದಲ್ಲಿ ಅನುಸರಿಸಿದ್ದ ರಣತಂತ್ರವನ್ನೇ ಉತ್ತರ ಪ್ರದೇಶದಲ್ಲೂ  ಅನುಸರಿಸುವ ಮೂಲಕ ಬಿಜೆಪಿ ಯಶಸ್ಸು ಸಾಧಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

BBK 13: ಗಾನವಿ ಹೇಳಿಕೆಗೆ ನೊಂದು ಗಗನ್ ತಾಯಿಗೆ ತಾನೇ ಕ್ಷಮೆ ಕೇಳಿ ಕಣ್ಣೀರು ಹಾಕಿದ ಸುದೀಪ್

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!