ಪ್ರಧಾನ ಸುದ್ದಿ

ಡ್ರಗ್ ಹಾವಳಿಯನ್ನು ನಾಲ್ಕು ವಾರಗಳಲ್ಲಿ ತೊಡೆದು ಹಾಕುತ್ತೇನೆ: ಅಮರಿಂದರ್ ಸಿಂಗ್

Guruprasad Narayana
ಚಂಡೀಘರ್: ಪಂಜಾಬ್ ರಾಜ್ಯದಲ್ಲಿರುವ ಡ್ರಗ್ ಹಾವಳಿಯನ್ನು ನಾಲ್ಕು ವಾರಗಳಲ್ಲಿ ತೊಡೆದುಹಾಕುವುದಾಗಿ ಕಾಂಗ್ರೆಸ್ ಮುಖಂಡ ಅಮರಿಂದರ್ ಸಿಂಗ್, ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಜಯಭೇರಿ ಸಾಧಿಸಿದ ನಂತರ ಹೇಳಿದ್ದಾರೆ. 
ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಕ್ಕಿರುವುದರಿಂದ ಮುಖ್ಯಮಂತ್ರಿಯಾಗಿ ಆಯ್ಕೆ ಆಗಲಿರುವ ಅಮರಿಂದರ್ ಸಿಂಗ್, ಮೊದಲ ಸಂಪುಟ ಸಭೆಯಲ್ಲಿ ೧೦೦ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.
ನೆನ್ನೆ ೭೬ ನೇ ವಸಂತಕ್ಕೆ ಕಾಲಿಟ್ಟಿರುವ ಅಮರಿಂದರ್ ಸಿಂಗ್, ತುಂಬಿದ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಚುನಾವಣಾ ಪ್ರಣಾಳಿಕೆಯಲ್ಲಿ ತಿಳಿಸಿದ್ದಂತೆ ಡ್ರಗ್ ಹಾವಳಿ ತಡೆಗಟ್ಟುವುದು ತಮ್ಮ ತುರ್ತು ಆದ್ಯತೆಗಳಲ್ಲಿ ಒಂದು ಎಂದು ಕೂಡ ಹೇಳಿದ್ದಾರೆ. ಸಾವಿರಾರು ಯುವಕರ ಜೀವನವನ್ನು ಹಾಳು ಮಾಡುತ್ತಿರುವ ಪ್ರತಿಯೊಬ್ಬನನ್ನು ಕಟಕಟೆಗೆ ತರುವುದಾಗಿ ಅವರು ಹೇಳಿದ್ದಾರೆ. ರಾಜ್ಯದಲ್ಲಿ ಹೆಚ್ಚಿರುವ ಡ್ರಗ್ ಹಾವಳಿ ಪಂಜಾಬ್ ಚುನಾವಣೆಯಲ್ಲಿ ಪ್ರಮುಖ ವಿಷಯವಾಗಿತ್ತು. 
ಇಂದು ಪಂಜಾಬ್ ಕಾಂಗ್ರೆಸ್ ಶಾಸಕರ ಸಭೆಯನ್ನು ಕರೆಯಲಾಗಿದೆ. ಈ ಸಂದರ್ಭದಲ್ಲಿ ಅಕಾಲಿ ದಳ ಮತ್ತು ಆಮ್ ಆದ್ಮಿ ಪಕ್ಷವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಅಮರಿಂದರ್ ಸಿಂಗ್ ಎಸ್ ಎ ಡಿ-ಬಿಜೆಪಿ ಮೈತ್ರಿಗೆ ಡೇರಾ ಬೆಂಬಲ ಸೂಚಿಸಿದ್ದು ಕಾಂಗ್ರೆಸ್ ಗೆ ಸಹಾಯ ಮಾಡಿದೆ ಎಂದಿದ್ದಾರೆ. 
ನವಜೋತ್ ಸಿಂಗ್ ಸಿದ್ಧು ಅವರು ಉಪಮುಖ್ಯಮಂತ್ರಿಯಾಗಲಿದ್ದಾರೆಯೇ ಎಂಬ ಪ್ರಶ್ನೆಗೆ, ಸದ್ಯಕ್ಕೆ ಕಾಂಗ್ರೆಸ್ ಅಧ್ಯಕ್ಷೆ ವಿದೇಶದಲ್ಲಿರುವುದರಿಂದ ಈ ನಿರ್ಧಾರವನ್ನು ಉಪಾಧ್ಯಕ್ಷ ರಾಹುಲ್ ಗಾಂಧಿ ತೆಗೆದುಕೊಳ್ಳಲಿದ್ದಾರೆ ಎಂದಿದ್ದಾರೆ. "ನಾವು ನಮ್ಮ ಶಿಫಾರಸ್ಸುಗಳನ್ನು ಕಳುಹಿಸಲಿದ್ದೇವೆ ಆದರೆ ಅಂತಿಮ ನಿರ್ಧಾರ ರಾಹುಲ್ ಅವರದ್ದು" ಎಂದು ಅಮರಿಂದರ್ ಹೇಳಿದ್ದಾರೆ. 
ನರೇಂದ್ರ ಮೋದಿ ಆಡಳಿತದ ಕೇಂದ್ರ ಸರ್ಕಾರದ ಸಹಕಾರವನ್ನು ಕೋರಿರುವ ಅವರು "ಪಂಜಾಬ್ ಬೇಡಿಕೆಗಳನ್ನು ಕೇಂದ್ರ ಸರ್ಕಾರ ಗುರುತಿಸಿ ನಮಗೆ ಸಹಾಯ ಮಾಡಲಿದೆ ಎಂದು ನಂಬಿದ್ದೇವೆ" ಎಂದಿದ್ದಾರೆ. 
೧೧೭ ಕ್ಷೇತ್ರ ಬಲಾಬಲದ ಪಂಜಾಬ್ ಚುನಾವಣೆಯಲ್ಲಿ ಕಾಂಗ್ರೆಸ್ ೭೭ ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದೆ. 
SCROLL FOR NEXT