ನವದೆಹಲಿ: ಮುಖ್ಯಮಂತ್ರಿ ಕುರ್ಚಿಗಾಗಿ ಹೋರಾಟ ನಡೆಸಿ ವಿಫಲರಾದ ತಮಿಳುನಾಡು ಮಾಜಿ ಮುಖ್ಯಮಂತ್ರಿ ಓ.ಪನ್ನೀರ್ ಸೆಲ್ವಂ ಅವರು ಈಗ ಎಐಎಡಿಎಂಕೆ ಪಕ್ಷದ ಚಿಹ್ನೆಗಾಗಿ ಕಾದಾಟ ಆರಂಭಿಸಿದ್ದಾರೆ. ಮುಂದಿನ ತಿಂಗಳು ನಡೆಯಲಿರುವ ಆರ್ ಕೆ ನಗರ ಉಪ ಚುನಾವಣೆಗೆ 'ಎರಡೆಲೆ' ಚಿಹ್ನೆ ತಮಗೆ ನೀಡುವಂತೆ ಪನ್ನೀರ್ ಸೆಲ್ವಂ ಬಣ ಶುಕ್ರವಾರ ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಿದೆ.
ನಿನ್ನೆಯಷ್ಟೆ ಎಐಎಡಿಎಂಕೆ ನಾಯಕ ಹಾಗೂ ಲೋಕಸಭೆ ಉಪ ಸಭಾಪತಿ ಎಂ ತಂಬಿದೊರೈ ನೇತೃತ್ವದಲ್ಲಿ ವಿ.ಕೆ.ಶಶಿಕಲಾ ಬಣ ಚುನಾವಣಾ ಆಯೋಗಕ್ಕೆ ಭೇಟಿ ನೀಡಿ, ಎಐಎಡಿಎಕೆ ಚಿಹ್ನೆಗೆ ಸಂಬಂಧಿಸಿದಂತೆ ಬಂಡಾಯ ಅಭ್ಯರ್ಥಿಗಳಿಗೆ ಸೊಪ್ಪು ಹಾಕಬೇಡಿ ಎಂದು ಮನವಿ ಮಾಡಿದ್ದರು.
ಇಂದು ಪಕ್ಷದ ಚಿಹ್ನೆ ನಮಗೆ ನೀಡುವಂತೆ ಪನ್ನೀರ್ ಸೆಲ್ವಂ ಬಣ ಆಯೋಗಕ್ಕೆ ಮನವಿ ಮಾಡಿದ್ದು, ಈ ಸಂಬಂಧ ಮಾರ್ಚ್ 20ರೊಳಗೆ ಸೂಕ್ತ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ,
ಈ ಸಂಬಂಧ ಕಳೆದ ಬುಧವಾರ ಪನ್ನೀರ್ ಸೆಲ್ವಂ ನೇತೃತ್ವದ ಒಂಬತ್ತು ಸದಸ್ಯರ ನಿಯೋಗ ಮುಖ್ಯ ಚುನಾವಣಾ ಆಯುಕ್ತ ನಜೀಂ ಜೈದಿ ಅವರನ್ನು ಭೇಟಿ ಮಾಡಿ, ವಿ.ಕೆ.ಶಶಿಕಲಾ ಕಾನೂನು ಬಾಹಿರವಾಗಿ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದು, ಅವರ ಆಯ್ಕೆಯನ್ನು ಅಸಿಂಧುಗೊಳಿಸಿ, ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಹೊಸದಾಗಿ ಚುನಾವಣೆ ನಡೆಸುವಂತೆ ಮನವಿ ಮಾಡಿದ್ದರು.
ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ನಿಧನದಿಂದ ತೆರವಾದ ಆರ್ ಕೆ ನಗರ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆಯಾಗಿದ್ದು, ಎಐಎಡಿಎಂಕೆಯಿಂದ ಶಶಿಕಲಾ ಸಂಬಂಧಿ ಟಿಟಿವಿ ಧಿನಕರನ್ ಅವರನ್ನು ಕಣಕ್ಕಿಳಿಸಲಾಗಿದೆ. ಅವರ ವಿರುದ್ಧ ಪನ್ನೀರ್ ಸೆಲ್ವಂ ಬಣ ಇ ಮಧುಸೂಧನನ್ ಅವರನ್ನು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ.