ನವದೆಹಲಿ: ರಿಲಯನ್ಸ್ ಜಿಯೋದ ಫ್ರೀ ಆಫರ್ ಇಂದಿಗೆ ಕೊನೆಗೊಳ್ಳುತ್ತಿದೆ ಎಂದು ಕೆಲವರು ಕೈಕೈ ಹಿಸುಕಿಕೊಳ್ಳುತ್ತಿರಬಹುದು. ಆದರೆ ಇಂದಿನಿಂದ ಇದಕ್ಕಿಂತಲೂ ಮಿಗಿಲಾದ ಸಾಕಷ್ಟು ಬದಲಾವಣೆಗಳಾಗುತ್ತಿವೆ. ಆ ಎಲ್ಲ ಬದಲಾವಣೆಗಳ ಸಣ್ಣ ಮಾಹಿತಿ ಇಲ್ಲಿದೆ.
ಫ್ರೀ ಜಿಯೋ ಸೇವೆ ಇನ್ನಿಲ್ಲ
ಭಾರತೀಯ ಟೆಲಿಕಾಂ ವಲಯದಲ್ಲಿ ಧೂಳೆಬ್ಬಿಸಿದ್ದ ರಿಲಯನ್ಸ್ ಜಿಯೋದ ಫ್ರೀ ಸೇವೆ ನಿನ್ನೆಗೆ ಕೊನೆಯಾಗಿದ್ದು, ಇಂದಿನಿಂದ ಜಿಯೋ ಗ್ರಾಹಕರು ಹಣ ನೀಡಿ ಸೇವೆ ಪಡೆಯಬೇಕಿದೆ. ಈಗಾಗಲೇ ರಿಲಯನ್ಸ್ ಸಂಸ್ಥೆ ಜಿಯೋ ಫ್ರೀ ಸೇವೆಯನ್ನು ಇನ್ನೂ 3 ತಿಂಗಳಿಗೆ ವಿಸ್ತರಿಸುವುದಾಗಿ ಹೇಳಿದೆಯಾದರೂ ಇದಕ್ಕೆ ಕೆಲ ಷರತ್ತುಗಳನ್ನು ವಿಧಿಸಿದೆ. ಅದರಂತೆ ಗ್ರಾಹಕರ 99 ರು. ನೀಡಿ ಪ್ರೈಮ್ ಸದಸ್ಯತ್ವ ಪಡೆದು ಬಳಿಕ 303 ರು.ರಿಚಾರ್ಜ್ ಮಾಡಿಸಿದರೆ ಈಗಿರುವ ಫ್ರೀ ಸೇವೆ ಮತ್ತೆ ಮೂರು ತಿಂಗಳಿಗೆ ಮುಂದುವರೆಯಲಿದೆ.
ಬಿಎಸ್ 3 ವಾಹನಗಳ ಮಾರಾಟವಿಲ್ಲ
ಹಳೆಯ ಮಾದರಿಯ ಬಿಎಸ್ 3 ವಾಹನಗಳ ಮಾರಾಟಕ್ಕೆ ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್ ನಿಷೇಧ ಹೇರಿದ್ದು, ಇಂದಿನಿಂದ ದೇಶದ ಯಾವುದೇ ಷೋರೂಂಗಳಲ್ಲಿ ಬಿಎಸ್ 3 ವಾಹನಗಳು ಮಾರಾಟವಾಗುವುದಿಲ್ಲ.
ಹಳೆ ನೋಟು ಇಟ್ಟುಕೊಂಡು ಸಿಕ್ಕಿಬಿದ್ದರೆ ಜೈಲು ಗ್ಯಾರಂಟಿ
ಇನ್ನು ನೋಟು ನಿಷೇಧ ಪರಿಣಾಮ ಹಳೆಯ 500 ಮತ್ತು 1000 ರುನೋಟುಗಳನ ಬದಲಾವಣೆ ಮತ್ತು ಜಮೆಗೆ ಕೇಂದ್ರ ಸರ್ಕಾರ ನೀಡಿದ್ದ ಕಾಲಾವಕಾಶ ನಿನ್ನೆಗೆ ಮುಕ್ತಾಯವಾಗಿದ್ದು, ಇಂದಿನಿಂದ ಹಳೆಯ ನೋಟುಗಳನ್ನು ಇಟ್ಟುಕೊಂಡವರಿಗೆ ಭಾರಿ ದಂಡ ಹಾಗೂ ಜೈಲು ಶಿಕ್ಷೆಯಾಗುವ ಸಾಧ್ಯತೆ. ಕಪ್ಪುಹಣವನ್ನು ಬಯಲಿಗೆಳೆಯುವ ಸಂಬಂಧ ಕೇಂದ್ರ ಸರ್ಕಾರ ಮಾರ್ಚ್ 31ರ ಗಡುವು ನೀಡಿತ್ತು. ಈ ಗಡುವಿನೊಳಗೆ ಹಳೆಯ ನೋಟು ಬದಲಾವಣೆಗೆ ಕಾಲಾವಕಾಶ ನೀಡಿತ್ತು.
ಹೊಸ ಸರಳೀಕೃತ ತೆರಿಗೆ ಪಾವತಿ ಅರ್ಜಿ, ತೆರಿಗೆ ಪಾವತಿಗೆ ಆಧಾರ್ ಕಡ್ಡಾಯ
ಏಪ್ರಿಲ್ ನಿಂದ ವಿತ್ತೀಯ ವರ್ಷಾರಂಭವಾಗುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಹೊಸ ಸರಳೀಕೃತ ತೆರಿಗೆ ಪಾವತಿ ಅರ್ಜಿಯನ್ನು ಹೊರ ತಂದಿದ್ದು, ಈ ಹಿಂದೆ ಮೂರು ಪುಟಗಳಿಗೆ ಇಳಿಕೆಯಾಗಿದ್ದ ಅರ್ಜಿಯನ್ನು ಇದೀಗ ಕೇವಲ ಒಂದು ಪುಟಕ್ಕೆ ಸೀಮಿತಗೊಳಿಸಲಾಗಿದೆ. ಏಪ್ರಿಲ್ 1ರಿಂದ ಹೊಸ ಐಟಿಆರ್ ಸಹಜ ಅರ್ಜಿಗಳು ಲಭ್ಯವಿದ್ದು, ಆದಾಯ ತೆರಿಗೆ ಲೆಕ್ಕಪತ್ರ ವಿವರ ಸಲ್ಲಿಕೆಗೆ ಜುಲೈ 31 ಕೊನೆಯ ದಿನವಾಗಿದೆ. ಇನ್ನು ಆನ್ ಲೈನ್‌ನಲ್ಲಿ ಆದಾಯ ತೆರಿಗೆ ವಿವರ ಸಲ್ಲಿಕೆ ಪ್ರಕ್ರಿಯೆ ಕೂಡ ಏಪ್ರಿಲ್ 1 ಅಂದರೆ ಇಂದಿನಿಂದಲೇ ಆರಂಭವಾಗಲಿದ್ದು, ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಡ್ಡಾಯವಾಗಿರಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಪಿಎಫ್ ಬಡ್ಡಿದರ 40 ವರ್ಷಗಳಲ್ಲೇ ಕನಿಷ್ಠ
ಭವಿಷ್ಯನಿಧಿ ಸೇರಿದಂತೆ ವಿವಿಧ ಉಳಿತಾಯ ಖಾತೆಗಳಲ್ಲಿನ ಠೇವಣಿ ಮೇಲಿನ ಬಡ್ಡಿದರ ಕಡಿಮೆಯಾಗಿದ್ದು, 40 ವರ್ಷಗಳಲ್ಲೇ ಕನಿಷ್ಠ ದರಕ್ಕೆ ಕುಸಿದಿದೆ. ನಿನ್ನೆ ನೂತನ ಬಡ್ಡಿದರಗಳನ್ನು ಘೋಷಣೆ ಮಾಡಿರುವ ಕೇಂದ್ರ ಸರ್ಕಾರ ಬಡ್ಡಿದರದಲ್ಲಿ 0.1ರಷ್ಟು ದರ ಇಳಿಕೆ ಮಾಡಿದೆ.
ಇದೇ ಮೊದಲ ಬಾರಿಗೆ ಏಪ್ರಿಲ್ 1ರಿಂದ ಕೇಂದ್ರ ಬಜೆಟ್ ಅನುಷ್ಠಾನ
ಮಾರ್ಚ್ ತಿಂಗಳಿನಲ್ಲೇ ಬಜೆಟ್ ಅನ್ನು ಅಂಗೀಕರಿಸುವ ಮೂಲಕ ಕೇಂದ್ರ ಸರ್ಕಾರ ಹೊಸ ದಾಖಲೆ ಬರೆದಿದ್ದು, ಇದೇ ಮೊದಲ ಬಾರಿಗೆ ದೇಶದಲ್ಲಿ ಏಪ್ರಿಲ್ 1ರಿಂದಲೇ ಕೇಂದ್ರ ಬಜೆಟ್ ಅನುಷ್ಠಾನಕ್ಕೆ ಬರಲಿದೆ. ಸಾಮಾನ್ಯಾವಾಗಿ ಫೆಬ್ರವರಿ ಅಂತ್ಯದಲ್ಲಿ ಬಜೆಟ್ ಮಂಡನೆಯಾಗುತ್ತಿತ್ತು. ಆದರೆ ಈ ಬಾರಿ ಕೇಂದ್ರ ಸರ್ಕಾರ ಫೆಬ್ರವರಿ1ರಂದೇ ಬಜೆಟ್ ಮಂಡಿಸಿ ದಾಖಲೆ ಬರೆದಿತ್ತು. ರಾಷ್ಟ್ರಪತಿಗಳ ಸಹಿ ಬಳಿಕ ಕೇಂದ್ರ ಬಜೆಟ್ ಏಪ್ರಿಲ್ 1ರಿಂದ ಜಾರಿಗೆ ಬರಲಿದೆ.
ಬ್ಯಾಂಕುಗಳಲ್ಲಿ ನಗದು ವಹಿವಾಟು, ಸೇವಾ ಶುಲ್ಕ ದುಬಾರಿ
ಇಂದಿನಿಂದ ಪ್ರಮುಖ ಬ್ಯಾಂಕುಗಳ ನಗದು ವಹಿವಾಟು ಹಾಗೂ ಸೇವಾ ಶುಲ್ಕ ಕೂಡ ದುಬಾರಿಯಾಗುತ್ತಿದ್ದು, ಈ ಹಿಂದೆ ಎಸ್ ಬಿಐ ಘೋಷಣೆ ಮಾಡಿದಂತೆ ಕನಿಷ್ಠ ಠೇವಣಿ ಮೇಲಿನ ಶುಲ್ಕ ಹಾಗೂ ಎಟಿಎಂ ಮತ್ತು ಬ್ಯಾಂಕಿಂಗ್ ಗಳ ಸೇವಾ ಶುಲ್ಕ ಕೂಡ ದುಬಾರಿಯಾಗಲಿದೆ. ನಗದು ವಹಿವಾಟಿನ ಮೇಲಿನ ಮಿತಿಯನ್ನು 2 ಲಕ್ಷ ರು.ಗಳಿಗೆ ಇಳಿಸಿ ಇತ್ತೀಚೆಗೆ ಸಂಸತ್ತಿನಲ್ಲಿ ಹಣಕಾಸು ಮಸೂದೆ ಅಂಗೀಕರಿಸಲಾಗಿದೆ. ಹೀಗಾಗಿ 2 ಲಕ್ಷ ರು.ಗಿಂತ ಹೆಚ್ಚು ನಗದು ವಹಿವಾಟು ನಡೆಸುವಂತೆ ಇಲ್ಲ. ಒಂದು ವೇಳೆ 2 ಲಕ್ಷ ರೂ. ಮೇಲ್ಪಟ್ಟನಗದುವಹಿವಾಟು ನಡೆಸಿ ಸಿಕ್ಕಿಬಿದ್ದರೆ ಅಷ್ಟೇ ಮೊತ್ತದ ದಂಡ ವಿಧಿಸಲಾಗುತ್ತದೆ. ಇದು ಏ.1ರಿಂದಲೇ ದೇಶಾದ್ಯಂತ ಜಾರಿಗೆ ಬರಲಿದೆ. ಉಳಿತಾಯ ಖಾತೆಯಲ್ಲಿ ಗ್ರಾಹಕರು ಮಾಸಿಕ ಸರಾಸರಿ ಕನಿಷ್ಠ ಬ್ಯಾಲೆನ್ಸ್ ಇಡದೇ ಹೋದರೆ ಎಸ್‌ಬಿಐ ಏ. 1ರಿಂದ ದಂಡ ವಿಧಿಸಲಿದೆ. ಮೆಟ್ರೋ ನಗರಗಳಲ್ಲಿ ಮಾಸಿಕ ಕನಿಷ್ಠ ಸರಾಸರಿ ಠೇವಣಿಯಾದ 5000 ರು. ಮೊತ್ತದ ಶೇ.75ಕ್ಕಿಂತ ಕಡಮೆ ಇದ್ದರೆ 100 ರು. ದಂಡ+ಸೇವಾ ತೆರಿಗೆ ಬೀಳಲಿದೆ.
ಎಸ್ ಬಿಎಂ ಸೇರಿದಂತೆ ಎಸ್ ಬಿಐನೊಂದಿಗೆ ಸಹವರ್ತಿ ಬ್ಯಾಂಕ್ ಗಳ ವಿಲೀನ
ಭಾರತೀಯ ಸ್ಟೇಟ್ ಬ್ಯಾಂಕ್‌ನಲ್ಲಿ (ಎಸ್‌ಬಿಐ), ಅದರ ಐದು ಸಹವರ್ತಿ ಬ್ಯಾಂಕ್‌ಗಳು ಶನಿವಾರ ವಿಲೀನಗೊಳ್ಳಲಿವೆ. ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಸ್ಟೇಟ್ ಬ್ಯಾಂಕ್ ಆಫ್ ತಿರುವಾಂಕೂರು, ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್, ಸ್ಟೇಟ್ ಬ್ಯಾಂಕ್ ಆಫ್ ಪಟಿಯಾಲಾ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಬಿಕಾನೇರ್ ಹಾಗೂ ಜೈಪುರಗಳು ಈ ದಿನ ಎಸ್‌ಬಿಐನಲ್ಲಿ ಲೀನವಾಗಲಿವೆ.
ವಾಹನ, ಆರೋಗ್ಯ ವಿಮೆ ಇನ್ನಷ್ಟು ದುಬಾರಿ
ಏಪ್ರಿಲ್ 1ರಿಂದ ವಾಹನ ಮತ್ತು ಆರೋಗ್ಯ ವಿಮೆಗಳು ತುಟ್ಟಿಯಾಗಲಿವೆ. ಏಜೆಂಟರಿಗೆ ನೀಡುವ ಕಮಿಶನ್ ಹೆಚ್ಚಳದಿಂದ ಪಾಲಿಸಿದಾರರು ಸುಮಾರು ಶೇ.5ರಷ್ಟುಹೆಚ್ಚು ಪ್ರೀಮಿಯಂ ತೆರಬೇಕಾಗುತ್ತದೆ. ಆದರೆ ಹಳೆಯ ವಿಮೆಗಳಿಗೆ ಇದು ಅನ್ವಯವಾಗದು. ಏ.1ರಿಂದ ಮಾಡಿಸುವ ಹೊಸ ವಿಮೆಗಳಿಗೆ ಮಾತ್ರ ಅನ್ವಯಿಸಲಿದೆ. ಜೊತೆಗೆ ಜೀವ ವಿಮೆಗಳಿಗೂ ಏರಿಕೆಗೂ ಸಂಬಂಧ ಇಲ್ಲ. ಇನ್ನು ಕೆಲ ವಾಹನಗಳ ಥರ್ಡ್ ಪಾರ್ಟಿ ಪ್ರೀಮಿಯಂ ಕೂಡ ಏರಲಿದೆ.
ಇದಲ್ಲದೇ ವಿದೇಶಿ ಸರ್ಕೀಟ್ ಬೋರ್ಡ್ ಇರುವ ಮೊಬೈಲ್ ಫೋನ್ ಗಳ ಮೇಲಿನ ಸುಂಕ, ಭಾರತದಲ್ಲಿ ಉತ್ಪಾದನೆಯಾಗುವ ಎಲ್‌ಇಡಿ ಬಲ್ಬ್ ಗಳ ಅಬಕಾರಿ ಸುಂಕ ಶೇ.6 ರಷ್ಟು ಏರಿಕೆ, ಆಮದಾದ ಗೋಡಂಬಿ ಮೇಲಿನ ಅಬಕಾರಿ ಸುಂಕ ಶೇ.30ರಿಂದ 45ಕ್ಕೇರಿಕೆ, ಸಿಗರೇಟು, ಸಿಗಾರ್, ತಂಬಾಕು, ಬೀಡಿ, ಪಾನ್ ಮಸಾಲ ಸುಂಕ ಏರಿಕೆ, ಶೇ.99.9 ಶುದ್ಧತೆಯ ಬೆಳ್ಳಿ ಪದಕ, ಬೆಳ್ಳಿ ನಾಣ್ಯದ ಮೇಲಿನ ಅಬಕಾರಿ ಸುಂಕ ಏರಿಕೆ, ದೇಶೀ ವಾಟರ್ ಫಿಲ್ಟರ್ ಚರ್ಮೋತ್ಪನ್ನಗಳು, ಸೋಲಾರ್ ಉಪಕರಣಗಳು, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಸ್ವೈಪ್ ಯಂತ್ರಗಳು ಮತ್ತು ಐಆರ್‌ಸಿಟಿಸಿ ಮೂಲಕ ಬುಕ್ ಆಗುವ ಆನ್ ಲೈನ್ ಟಿಕೆಟ್ ದರಗಳು ಏರಿಕೆಯಾಗಲಿವೆ.