ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ನೋಟು ನಿಷೇಧ ಜಾರಿಯಿಂದಾಗಿ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ಮುದ್ರಣ ವೆಚ್ಚದಲ್ಲಿ ಸುಮಾರು 1 ಸಾವಿರ ಕೋಟಿ ರು. ಉಳಿತಾಯವಾಗಲಿದೆ ಎಂದು ಹೇಳಲಾಗುತ್ತಿದೆ.
ನವೆಂಬರ್ 9ರಂದು ಪ್ರಧಾನಿ ನರೇಂದ್ರ ಮೋದಿ ಅವರು 500 ಮತ್ತು 1000 ರು. ಮುಖಬೆಲೆಯ ನೋಟುಗಳನ್ನು ನಿಷೇಧ ಮಾಡಿ ಆದೇಶ ಜಾರಿ ಮಾಡಿದ್ದರು. ಅದರಂತೆ ಚಾಲ್ತಿಯಲ್ಲಿದ್ದ ಸುಮಾರು 15 ಲಕ್ಷ ಕೋಟಿ ಮೌಲ್ಯದ 500 ಮತ್ತು 1000 ರು. ಮುಖಬೆಲೆಯ ನೋಟುಗಳು ಅಮಾನ್ಯಗೊಂಡಿದ್ದು, ನೋಟು ನಿಷೇಧದಿಂದಾಗಿ ಏರ್ಪಟ್ಟಿದ್ದ ನಗದು ಕೊರತೆ ಸರಿದೂಗಿಸಲು ಆರ್ ಬಿಐ ಹೊಸ 500 ಮತ್ತು 2000 ರು.ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ತಂದಿತ್ತು. ಅದರಂತೆ ನಗದು ಕೊರತೆಯನ್ನು ಸಂಪೂರ್ಣವಾಗಿ ಸರಿದೂಗಿಸಲು ಆರ್ ಬಿಇ ಇನ್ನು ಕೇವಲ 1.15 ಲಕ್ಷ ಕೋಟಿ ಮೌಲ್ಯದ ನೋಟುಗಳನ್ನು ಮುದ್ರಿಸಿದರೆ ಸಾಕಾಗುತ್ತದೆ.
ಮೂಲಕ ಆರ್ ಬಿಐ ಮತ್ತು ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ನೋಟು ಮುದ್ರಣ ವೆಚ್ಚದಲ್ಲಿ ಸುಮಾರು 1 ಸಾವಿರ ಕೋಟಿ ರು. ಉಳಿತಾಯವಾಗಲಿದೆ ಎಂದು ಆರ್ ಬಿಐ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಇನ್ನು ಉಳಿದ ಹಣ ನಗದು ರಹಿತವಾಗಿ ಚಲಾವಣೆಯಲ್ಲಿದ್ದು, ಡಿಜಿಟಲ್ ಹಣ ರೂಪದಲ್ಲಿ ಚಲಾವಣೆಯಾಗುತ್ತಿದೆ. ಹೀಗಾಗಿ ಇದಕ್ಕೆ ನೋಟು ಮುದ್ರಿಸುವ ಅಗತ್ಯವಿಲ್ಲ. ಇನ್ನು ಬಾಕಿ ಉಳಿದಿರುವ ನೋಟು ಮುದ್ರಣ ಕಾರ್ಯ ಇದೇ ಏಪ್ರಿಲ್ 15ರೊಳಗೆ ಸಂಪೂರ್ಣವಾಗಲಿದೆ ಎಂದು ಆರ್ ಬಿಐ ಮಾಹಿತಿ ನೀಡಿದೆ.
ನೋಟು ನಿಷೇಧಕ್ಕೂ ಮೊದಲು ನಗದು ರಹಿತ ವಹಿವಾಟಿನ ಪ್ರಮಾಣ ಕೇವಲ 2.3 ಲಕ್ಷ ಕೋಟಿಯಷ್ಟಿತ್ತು. ಆದರೆ ನೋಟು ನಿಷೇಧದ ಬಳಿಕ ಈ ಪ್ರಮಾಣ ದುಪ್ಪಟ್ಟಾಗಿದ್ದು, ಪ್ರಸ್ತುತ 3.5 ಲಕ್ಷಕೋಟಿಗೇರಿದೆ. ಅಂತೆಯೇ ಮೊಬೈಲ್ ಬ್ಯಾಂಕಿಂಗ್ ಪ್ರಮಾಣ ಕೂಡ ಶೇ.35ರಷ್ಟು ಏರಿಕೆಯಾಗಿದ್ದು, ಜನವರಿಯೊಂದರಲ್ಲೇ 1383 ಬಿಲಿಯನ್ ವಹಿವಾಟಾಗಿದೆ. ಪ್ರತಿ ನಿತ್ಯ ಸುಮಾರು 5,476 ಕಾರ್ಡ್ ಸ್ವೈಪಿಂಗ್ ಮಷಿನ್ ಗಳನ್ನು ಅಳವಡಿಸಲಾಗುತ್ತಿದೆ. ನೋಟು ನಿಷೇಧಕ್ಕೂ ಮೊದಲು ದೇಶದಲ್ಲಿ ಸುಮಾರು 2.5 ಲಕ್ಷ ಸ್ವೈಪಿಂಗ್ ಮಷಿನ್ ಗಳಿತ್ತು. ನೋಟು ನಿಷೇಧ ಪರಿಣಾಮ ಈ ಸಂಖ್ಯೆ ಇದೀಗ 5.04 ಲಕ್ಷಕ್ಕೇರಿದೆ. ಅಂತೆಯೇ ಕಾರ್ಡ್ ಗಳ ಮೂಲಕ ಪಾವತಿ ಪ್ರಮಾಣ ಕೂಡ ಜನವರಿಯಲ್ಲಿ 327 ಬಿಲಿಯನ್ ನಿಂದ 490 ಬಿಲಿಯನ್ ಗೇರಿದೆ ಎಂದು ಆರ್ ಬಿಐ ಮಾಹಿತಿ ನೀಡಿದೆ.