ನವದೆಹಲಿ: ಪಾಕಿಸ್ತಾನ ಸೇನೆ ಇಬ್ಬರು ಭಾರತೀಯ ಯೋಧರ ಶಿರಚ್ಛೇದ ಮಾಡಿದ ಬಗ್ಗೆ ನಮ್ಮ ಬಳಿ ಬಲವಾದ ಸಾಕ್ಷ್ಯ ಇದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಗೋಪಾಲ್ ಬಗ್ಲಾಯ್ ಅವರು ಬುಧವಾರ ಹೇಳಿದ್ದಾರೆ.
ಪಾಕಿಸ್ತಾನ ಸೇನೆಯ ಪಾಶವೀ ಕೃತ್ಯಕ್ಕೆ ಸಂಬಂಧಿಸಿದಂತೆ ನಮ್ಮ ಬಳಿ ಬಲವಾದ ಸಾಕ್ಷ್ಯ ಇದ್ದು, ಅಮಾನವೀಯವಾಗಿ ನಡೆದುಕೊಂಡ ಸೇನಾ ಸಿಬ್ಬಂದಿಯನ್ನು ಶಿಕ್ಷೆಗೆ ಗುರಿಪಡಿಸಬೇಕು ಎಂದು ಭಾರತ ಒತ್ತಾಯಿಸಿರುವುದಾಗಿ ಬಗ್ಲಾಯ್ ತಿಳಿಸಿದ್ದಾರೆ.
ಇದಕ್ಕು ಮುನ್ನ ಭಾರತೀಯ ಯೋಧರ ಶಿರಚ್ಛೇದಕ್ಕೆ ಸಂಬಂಧಿಸಿದಂತೆ ಭಾರತ, ಪಾಕ್ ರಾಯಭಾರಿ ಅಬ್ದುಲ್ ಬಸಿತ್ ಗೆ ಸಮನ್ಸ್ ಜಾರಿ ಮಾಡಿದ್ದು, ಸೇನೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿತ್ತು.
ಜಮ್ಮು ಮತ್ತು ಕಾಶ್ಮೀರದ ಪೂಂಚ್ ನ ಕೃಷ್ಣ ಘಾಟಿ ಸೆಕ್ಟರ್ ನಲ್ಲಿ ನಡೆದ ಯೋಧರ ಶಿರಚ್ಛೇದದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದ ಭಾರತೀಯ ಸೇನೆ, ಪಾಕಿಸ್ತಾನ ಕೃತ್ಯವನ್ನು ಕಟುವಾಗಿ ಖಂಡಿಸಿತ್ತು. ಇದೊಂದು ಪಾಶವೀ ಕೃತ್ಯ ಮತ್ತು ಅಮಾನವೀಯ ನಡುವಳಿಕೆ ಎಂದು ಪ್ರತಿಭಟನೆ ಸಲ್ಲಿಸಿರುವುದಾಗಿ ಭಾರತೀಯ ಸೇನೆ ಇಂದು ಪ್ರಕಟಣೆಯಲ್ಲಿ ತಿಳಿಸಿದೆ.
ಕಳೆದ ಸೋಮವಾರ ಭಾರತದ ಭೂಪ್ರದೇಶಕ್ಕೆ ನುಗ್ಗಿ ಅಪ್ರಚೋದಿತ ದಾಳಿ ನಡೆಸಿದ್ದ ಪಾಕಿಸ್ತಾನ ಸೇನೆ, ಜಮ್ಮುವಿನಲ್ಲಿ ಇಬ್ಬರು ಯೋಧರ ಅಂಗಾಂಗಗಳನ್ನು ಕತ್ತರಿಸಿತ್ತು.