ನವದೆಹಲಿ: ದೇಶಾದ್ಯಂತ ವ್ಯಾಪಕ ಪ್ರತಿಭಟನೆ ಮತ್ತು ಆಕ್ರೋಶಕ್ಕೆ ಕಾರಣವಾಗಿದ್ದ ನಿರ್ಭಯಾ ಹತ್ಯಾಚಾರ ಪ್ರಕರಣದ ಅಂತಿಮ ತೀರ್ಪು ಸುಪ್ರೀಂ ಕೋರ್ಟ್ ನಿಂದ ಶುಕ್ರವಾರ ಪ್ರಕಟಗೊಳ್ಳುತ್ತಿದ್ದು, ತಮಗೆ ನ್ಯಾಯ ದೊರೆಯುವ ವಿಶ್ವಾಸವಿದೆ ಎಂದು ನಿರ್ಭಯಾ ಪೋಷಕರು ಹೇಳಿದ್ದಾರೆ.
ಪ್ರಕರಣದ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ನಿರ್ಭಯಾ ತಾಯಿ, ದೇಶದ ನ್ಯಾಯಾಂಗ ವ್ಯವಸ್ಥೆಯ ಮೇಲೆ ತಮಗೆ ಸಂಪೂರ್ಣ ವಿಶ್ವಾಸವಿದೆ. ಸುಪ್ರೀಂ ಕೋರ್ಟ್ ನಿಂದ ತಮಗೆ ನ್ಯಾಯದೊರೆಯುವ ವಿಶ್ವಾಸವಿದೆ ಎಂದು ಹೇಳಿದ್ದಾರೆ. "ನಮ್ಮ ದೇಶದಲ್ಲಿ ಅತ್ಯುತ್ತಮ ನ್ಯಾಯಾಂಗ ವ್ಯವಸ್ಥೆ ಇದ್ದು, ಸುಪ್ರೀಂ ಕೋರ್ಟ್ ಖಂಡಿತಾ ಹತ್ಯಾಚಾರ ಅಪರಾಧಿಗಳಿಗೆ ಗಲ್ಲುಶಿಕ್ಷೆ ವಿಧಿಸುತ್ತದೆ. ಮಹಿಳೆಯ ಮೇಲಿನ ದೌರ್ಜನ್ಯ ನಡೆಸುವವರಿಗೆ ತಮ್ಮ ಮಗಳ ಪ್ರಕರಣ ಖಂಡಿತಾ ಒಂದು ಎಚ್ಚರಿಕೆಯಾಗಿರುತ್ತದೆ" ಎಂದು ಅವರು ಹೇಳಿದರು.
ಇನ್ನು ಪ್ರಕರಣ ಸಂಬಂಧ ಪ್ರತಿಕ್ರಿಯಿಸಿದ ನಿರ್ಭಯಾ ತಂದೆ, ತಮ್ಮ ಮಗಳನ್ನು ಕೊಂದ ಕೊಲೆಗಡುಕರಿಗೆ ಖಂಡಿತಾ ಸುಪ್ರೀಂ ಕೋರ್ಟ್ ಗಲ್ಲು ಶಿಕ್ಷೆ ನೀಡುತ್ತದೆ. ದೇವರೂ ಕೂಡ ಇವರನ್ನು ರಕ್ಷಿಸುವುದಿಲ್ಲ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.