ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್
ನವದೆಹಲಿ: ವಜಾಗೊಂಡಿರುವ ದೆಹಲಿ ಸಚಿವ ಕಪಿಲ್ ಮಿಶ್ರ, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿರುವ ಹಿನ್ನಲೆಯಲ್ಲಿ ಕೇಜ್ರಿವಾಲ್ ರಾಜೀನಾಮೆ ನೀಡಬೇಕು ಅಥವಾ ಜೈಲಿಗೆ ಹೋಗಬೇಕು ಎಂದು ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ ಸೋಮವಾರ ಹೇಳಿದ್ದಾರೆ.
ಆಮ್ ಆದ್ಮಿ ಪಕ್ಷದ ಮುಖಂಡ ಮೇ ೧೦ ೨೦೧೩ರಂದು ಮಾಡಿದ್ದ ಟ್ವೀಟ್ ಬಗ್ಗೆ ತಿವಾರಿ ಗಮನ ಸೆಳೆದಿದ್ದಾರೆ. "ಭ್ರಷ್ಟಾಚಾರಕ್ಕೆ ಜನ ಕೇವಲ ರಾಜೀನಾಮೆ ನೀಡಬೇಕೆ ಅಥವಾ ಅವರನ್ನು ಜೈಲಿಗೆ ಕಳುಹಿಸಬೇಕೇ?" ಎಂದು ಕೇಜ್ರಿವಾಲ್ ಬರೆದಿದ್ದನ್ನು ಅವರು ಪುನರುಚ್ಛಿಸಿದ್ದಾರೆ.
ಕೇಜ್ರಿವಾಲ್ ತಮ್ಮ ಹಣೆಬರಹವನ್ನು ನಿರ್ಧರಿಸಬೇಕು ಎಂದಿರುವ ಬಿಜೆಪಿ ಮುಖಂಡ "ಜೈಲಿಗೆ ಹೋಗಿ ಅಥವಾ ರಾಜೀನಾಮೆ ನೀಡಿ. ನೀವೇ ಹೇಳಿರುವಂತೆ ದೆಹಲಿಯ ಮುಖ್ಯಮಂತ್ರಿಯಾಗಿ ನೀವೇ ಇದರ ಬಗ್ಗೆ ನಿಶ್ಚಯ ಮಾಡಿ ಅರವಿಂದ್ ಕೇಜ್ರಿವಾಲ್" ಎಂದು ಹೇಳಿದ್ದಾರೆ.
ಭಾನುವಾರ ಕಪಿಲ್ ಮಿಶ್ರಾ ಅವರನ್ನು ಕೇಜ್ರಿವಾಲ್ ತಮ್ಮ ಸಚಿವ ಸಂಪುಟದಿಂದ ಉಚ್ಛಾಟಿಸಿದ್ದರು. ಆ ನಂತರ ಸುದ್ದಿಗೋಷ್ಠಿ ನಡೆಸಿದ ಮಿಶ್ರಾ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರು ಸಿಎಂ ಕೇಜ್ರಿವಾಲ್ ಅವರಿಗೆ 2 ಕೋಟಿ ರೂ. ಲಂಚ ನೀಡಿದ್ದಾರೆ ಎಂದು ಆರೋಪಿಸಿದ್ದರು.