ಸಮಾವೇಶದಲ್ಲಿ ಎಚ್.ಕೆ.ಪಾಟೀಲ್ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಎಂ.ವೀರಪ್ಪ ಮೊಯಿಲಿ
ಬೆಂಗಳೂರು: ಪಂಚಾಯತ್ ರಾಜ್ ಕಾಯ್ದೆ ಜಾರಿಯಿಂದಾಗಿ ನೈಜ ಪ್ರಜಾಪ್ರಭುತ್ವ ಅನುಷ್ಠಾನಗೊಂಡಿದೆ. ಅಧಿಕಾರ ವಿಕೇಂದ್ರೀಕರಣದಿಂದ ಎಲ್ಲರಿಗೂ ಸೌಲಭ್ಯ, ಸವಲತ್ತುಗಳು ಸಿಕ್ಕಿವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ್ ಅವರು ಬುಧವಾರ ಹೇಳಿದ್ದಾರೆ.
ಇಂದು ನಗರದ ಅರಮನೆ ಮೈದಾನದಲ್ಲಿ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ಆಯೋಜಿಸಿದ್ದ ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ ಅನುಷ್ಠಾನದ ರಜತ ಮಹೋತ್ಸವ ಹಾಗೂ ಸರ್ಕಾರದ ಸಾಧನೆಯ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಎಚ್.ಕೆ.ಪಾಟೀಲ್ ಅವರು, ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ ಒಂದು ಕ್ರಾಂತಿಕಾರಕ ಕಾಯ್ದೆ ಎಂದು ಬಣ್ಣಿಸಿದರು.
ಕರ್ನಾಟಕದ ಪಂಚಾಯತ್‌ರಾಜ್ ಕಾಯ್ದೆ ಅಸ್ತಿತ್ವಕ್ಕೆ ಬಂದು ಮೇ 10, 2017ಕ್ಕೆ 25 ವರ್ಷಗಳು ಸಂದಿವೆ. ಈ ಕಾಯ್ದೆ ಸಾಮಾಜಿಕ ಮೌನ ಕ್ರಾಂತಿಗೆ ನಾಂದಿ ಹಾಡಿದೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ಮೂಲಕ ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯ ಸರ್ಕಾರ ಗಣನೀಯ ಸಾಧನೆ ಮಾಡಿದೆ. ಎಲ್ಲರಿಗೂ ಕುಡಿಯುವ ನೀರು ಒದಗಿಸುವ ಕಾರ್ಯವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ್ದೇವೆ ಎಂದರು. ಅಲ್ಲದೆ ಗ್ರಾಮೀಣ ಜನರಿಗೆ ಅವಶ್ಯವಾದ ಭೂ ದಾಖಲೆ, ಪತ್ರಗಳು ಮತ್ತಿತರ ಸೇವೆಗಳಿಗೆ ಏಕಗವಾಕ್ಷಿ ಸೇವಾ ಕೇಂದ್ರಗಳನ್ನು ಆರಂಭಿಸಲಾಗಿದೆ ಎಂದು ಸಚಿವರು ತಿಳಿಸಿದರು.