ಬಾಂಬ್ ನಾಗ - ಮನೆಯಲ್ಲಿ ಪತ್ತೆಯಾದ ಹಣ
ಬೆಂಗಳೂರು: ಹಲವು ದಿನಗಳಿಂದ ತಲೆಮರೆಸಿಕೊಂಡಿದ್ದ ಬಿಬಿಎಂಪಿ ಮಾಜಿ ಕಾರ್ಪೋರೇಟರ್ ಹಾಗೂ ರೌಡಿ ಶೀಟರ್ ಬಾಂಬ್ ನಾಗ ಅಲಿಯಾಸ್ ವಿ ನಾಗರಾಜ್ ನನ್ನು ತಮಿಳುನಾಡಿನ ಆರ್ಕಾಟ್ ನಲ್ಲಿ ಗುರುವಾರ ಕರ್ನಾಟಕ ಪೊಲೀಸರು ಬಂಧಿಸಿದ್ದಾರೆ.
ಕಳೆದ 27 ದಿನಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಬಾಂಬ್ ನಾಗ ಮತ್ತು ಆತನ ಮಕ್ಕಳಾದ ಗಾಂಧಿ ಹಾಗೂ ಶಾಸ್ತ್ರಿಯನ್ನು ಇಂದು ತಮಿಳುನಾಡಿನ ವೆಲ್ಲೂರು ಜಿಲ್ಲೆಯ ಆರ್ಕಾಟ್ ನಲ್ಲಿ ಎಸಿಪಿ ರವಿ ಕುಮಾರ್ ನೇತೃತ್ವದ ವಿಶೇಷ ಪೊಲೀಸ್ ತಂಡ ಬಂಧಿಸಿದೆ.
ಏಪ್ರಿಲ್ 14ರಂದು ಶ್ರೀರಾಂಪುರದಲ್ಲಿರುವ ಬಾಂಬ್ ನಾಗನ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದ ವೇಳೆ ಕೋಟ್ಯಂತರ ರುಪಾಯಿ ನಿಷೇಧಿತ 500 ಹಾಗೂ 1000 ರುಪಾಯಿ ನೋಟುಗಳು ಪತ್ತೆಯಾಗಿದ್ದವು. ದಾಳಿ ವೇಳೆ ಪೊಲೀಸರಿಂದ ತಪ್ಪಿಸಿಕೊಂಡಿದ್ದ ನಾಗನ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದರು.
ಏತನ್ಮಧ್ಯೆ ರಹಸ್ಯ ಸ್ಥಳದಿಂದ ಬಾಂಬ್ ನಾಗ ತನ್ನ ವಕೀಲರ ಮೂಲಕ ಮಾಧ್ಯಮಗಳಿಗೆ ವಿಡಿಯೋ ರವಾನಿಸಿ, ಅದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ರಾಜಕಾರಣಿಗಳು, ಪೊಲೀಸರ ವಿರುದ್ಧ ವಾಗ್ದಾಳಿ ನಡೆಸಿದ್ದ. ಅಲ್ಲದೇ ತಾನು ಶರಣಾಗಲು ಷರತ್ತು ವಿಧಿಸಿದ್ದ. ಹೈಕೋರ್ಟ್ ಕೂಡಾ ಬಾಂಬ್ ನಾಗನಿಗೆ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿತ್ತು.
ನಂತರ 2ನೇ ವಿಡಿಯೋ ಬಿಡುಗಡೆ ಮಾಡಿ, ಗೃಹ ಸಚಿವರಾದ ಪರಮೇಶ್ವರ್ ಅವರು ಒಪ್ಪಿದರೆ ತಾನು ಹತ್ತು ನಿಮಿಷದಲ್ಲೇ ಶರಣಾಗುವೆ ಎಂದು ಹೇಳಿದ್ದ. ಪೊಲೀಸರಿಗೂ ಷರತ್ತು ವಿಧಿಸಿದ್ದ.